ನ್ಯೂಯಾರ್ಕ್, ಸೆ.26(Daijiworld News/SS): ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆಯಿಂದ ಭಾರತ ಯಾವತ್ತಿಗೂ ಹಿಂದೆ ಸರಿದಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ನ್ಯೂಯಾರ್ಕ್'ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆಯನ್ನು ಹತ್ತಿಕ್ಕುವ ವಿಷಯದಲ್ಲಿ ಪಾಕಿಸ್ತಾನದ ಪ್ರಯತ್ನ ಬದಲಾಗಿಲ್ಲ. ಸಮಸ್ಯೆಯನ್ನು ನಿವಾರಿಸಲು ಪಾಕಿಸ್ತಾನ ತಳಮಟ್ಟದ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಮತ್ತೆ ಒತ್ತಾಯಿಸಿದ್ದಾರೆ.
ಭಯೋತ್ಪಾದನೆಯನ್ನು ನಿಗ್ರಹಿಸುವ ವಿಚಾರದಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಂದು ನಾವು ಈ ಹಿಂದೆ ಹೇಳಿದ್ದೇವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆಯಿಂದ ಭಾರತ ಯಾವತ್ತಿಗೂ ಹಿಂದೆ ಸರಿದಿಲ್ಲ. ಆದರೆ ಭಯೋತ್ಪಾದನೆಯನ್ನು ನಿಗ್ರಹಿಸಲು ಪ್ರಯತ್ನ ನಡೆಸದಿದ್ದರೆ ಪಾಕ್ ಜೊತೆಗೆ ಮಾತುಕತೆಗೆ ಎಂದಿಗೂ ಸಿದ್ಧವಿಲ್ಲ ಎಂದು ಹೇಳಿದರು.
ಇದೇ ವೇಳೆ ಕಾಶ್ಮೀರ ವಿಷಯದ ಕುರಿತು ಭಾರತದ ನಿಲುವನ್ನು ಮತ್ತೆ ಪ್ರತಿಪಾದಿಸಿದ ರವೀಶ್ ಕುಮಾರ್, ಇದು ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ವಿಷಯವಾಗಿದ್ದು ಇದರಲ್ಲಿ ಮೂರನೇ ವ್ಯಕ್ತಿ ಅಥವಾ ದೇಶಕ್ಕೆ ಮಧ್ಯಪ್ರವೇಶಿಸಲು ಅವಕಾಶವಿಲ್ಲ ಎಂದು ಪುನರುಚ್ಛರಿಸಿದ್ದಾರೆ.