ನ್ಯೂಯಾರ್ಕ್, ಸೆ.25(Daijiworld News/SS): ಮಹಾತ್ಮಾ ಗಾಂಧಿಯವರ ತತ್ವಗಳು ಮಾನವೀಯತೆಯನ್ನು ಕಾಪಾಡಲು ಮಾರ್ಗದರ್ಶನದಂತೆ ಕೆಲಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯವರನ್ನು ಭೇಟಿ ಮಾಡದವರು ಸಹ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಜಗತ್ತಿನ ಖ್ಯಾತ ನಾಯಕರಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ನೆಲ್ಸನ್ ಮಂಡೇಲಾ ಅವರ ನೀತಿ ಮತ್ತು ತತ್ವಗಳು ಮಹಾತ್ಮಾ ಗಾಂಧೀಜಿಯವರ ದೃಷ್ಟಿಕೋನಗಳನ್ನು ಆಧರಿಸಿಕೊಂಡಿದ್ದವು ಎಂದು ತಿಳಿಸಿದರು.
ಜಗತ್ತಿನ ಹವಾಮಾನ ಬದಲಾವಣೆಯಾಗಿರಲಿ, ಇಲ್ಲ ಭಯೋತ್ಪಾದನೆಯಾಗಿರಲಿ, ಭ್ರಷ್ಟಾಚಾರವಾಗಿರಲಿ ಅಥವಾ ಸ್ವಾರ್ಥರಹಿತ ಸಮಾಜ ಸೇವೆಯಾಗಿರಲಿ ಮಹಾತ್ಮಾ ಗಾಂಧಿಯವರ ತತ್ವಗಳು ಮಾನವೀಯತೆಯನ್ನು ಕಾಪಾಡಲು ಮಾರ್ಗದರ್ಶನದಂತೆ ಕೆಲಸ ಮಾಡಿದೆ ಎಂದು ಹೇಳಿದರು.
ಗಾಂಧೀಜಿಯವರು ತಮ್ಮ ಜೀವನದಲ್ಲಿ ಯಾರ ಮೇಲೆಯೂ ಪ್ರಭಾವ ಬೀರಲು ಪ್ರಯತ್ನ ಮಾಡುತ್ತಿರಲಿಲ್ಲ. ಆದರೆ ಅವರೇ ಬೇರೆಯವರಿಗೆ ಸ್ಪೂರ್ತಿಯ ಸೆಲೆಯಾಗುತ್ತಿದ್ದರು. ನಾವು ಇಂದಿನ 21ನೇ ಶತಮಾನದಲ್ಲಿ ಹೇಗೆ ಪ್ರಭಾವ ಬೀರಬೇಕು ಎಂಬ ಯುಗದಲ್ಲಿ ಬದುಕುತ್ತಿದ್ದೇವೆ. ಆದರೆ ಗಾಂಧೀಜಿಯವರ ದೃಷ್ಟಿ ಹೇಗೆ ಸ್ಫೂರ್ತಿ ನೀಡುವುದು ಎಂಬುದಾಗಿತ್ತು ಎಂದು ಹೇಳಿದರುರು.
ಗಾಂಧೀಜಿಯವರ ಕೊಡುಗೆ ಭಾರತದಿಂದಾಚೆಗೆ ಸಾಕಷ್ಟಿದೆ. ಗಾಂಧೀಜಿಯವರು ಭಾರತೀಯನಾಗಿದ್ದರೂ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರಿಗೆ ಪ್ರಜಾಪ್ರಭುತ್ವದ ಸ್ಪಷ್ಟ ತಿಳುವಳಿಕೆ ಇತ್ತು. ಜನರು ಕೇವಲ ಸರ್ಕಾರಗಳ ಮೇಲೆ ಅವಲಂಬಿತವಾಗಿರದೆ ಸ್ವಾವಲಂಬಿಗಳಾಗಿರಬೇಕು ಎಂಬುದನ್ನು ಹೇಳಿಕೊಟ್ಟವರು ಗಾಂಧೀಜಿ ಎಂದು ಹೇಳಿದರು.