ನ್ಯೂಯಾರ್ಕ್, ಸೆ.25(Daijiworld News/SS): ಭಾರತ ಅತ್ಯುತ್ತಮ ಪ್ರಧಾನಿಯನ್ನು ಪಡೆದಿದೆ. ಎಲ್ಲ ಸಮಸ್ಯೆಗಳನ್ನು ಅವರೊಬ್ಬರೇ ಬಗೆಹರಿಸಬಲ್ಲರು. ಅದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶೀಘ್ರದಲ್ಲೇ ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತೇವೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ಭಾರತದಲ್ಲಿ ಗಲಾಟೆಗಳು ಸಾಮಾನ್ಯವಾಗಿದ್ದವು. ಆದರೆ ಅವರು ಅಧಿಕಾರಕ್ಕೆ ಬಂದ ಬಳಿಕ ಮನೆಯ ಯಜಮಾನನಂತೆ ದೇಶವನ್ನು ಒಟ್ಟುಗೂಡಿಸಿದ್ದಾರೆ ಎಂದು ಹೇಳಿದರು.
ಉಗ್ರವಾದದ ವಿರುದ್ಧ ಹೋರಾಟಕ್ಕೆ ಮತ್ತೊಮ್ಮೆ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ಟ್ರಂಪ್, ಉಗ್ರವಾದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಪಾಕ್ ಪ್ರಧಾನಿಗೆ ಸೂಚಿಸಿದ್ದೇನೆ ಎಂದು ಹೇಳಿದರು. ಭಾರತ ಭಯೋತ್ಪಾದನೆಯನ್ನು ಎದುರಿಸಲು ಸಮರ್ಥವಾಗಿದೆ. ಪ್ರಧಾನಿ ಮೋದಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪರಸ್ಪರ ಅರಿತುಕೊಂಡಾಗ ಭೇಟಿಯಾಗುತ್ತಾರೆ. ಆ ಸಭೆಯಿಂದ ಉತ್ತಮ ಫಲಿತಾಂಶ ಬರುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಟ್ರಂಪ್ ಹೇಳಿದರು.
ಪಾಕಿಸ್ತಾನಕ್ಕೆ ನಾನು ಸಂದೇಶ ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡುತ್ತಾರೆ. ಅವರು ಕೊಡುವ ಸಂದೇಶ ತುಂಬಾ ಸ್ಪಷ್ಟವಾಗಿರಲಿದ್ದು, ಬಲಯುತವಾಗಿರುತ್ತದೆ ಎಂದು ಹೇಳಿದ್ದಾರೆ.