ನ್ಯೂಯಾರ್ಕ್, ಸೆ.25(Daijiworld News/SS): ಚೀನಾದ ಜೊತೆಗೆ ನಾವು ವಿಶಿಷ್ಠ ಸಂಬಂಧವನ್ನು ಹೊಂದಿದ್ದೇವೆ. ಮುಖ್ಯವಾದ ವಿಚಾರಗಳನ್ನೆಲ್ಲಾ ಅವರ ಜೊತೆ ನಾವು ಖಾಸಗಿಯಾಗಿ ಮಾತನಾಡುತ್ತೇವೆ. ನಾವು ಸಾರ್ವಜನಿಕ ಹೇಳಿಕೆಗಳನ್ನು ನೀಡುವುದಿಲ್ಲ. ಅಂತಹ ಸಂಬಂಧ ನಮ್ಮಿಬ್ಬರ ಮಧ್ಯೆ ಇದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ನಮ್ಮ ವಿದೇಶಾಂಗ ನೀತಿ, ದೇಶಿ ನೀತಿಯಲ್ಲಿ ಚೀನಾ ಯಾವತ್ತಿಗೂ ಮಧ್ಯಪ್ರವೇಶಿಸಿಲ್ಲ. ಚೀನಾದಿಂದ ಕಲಿಯಬೇಕಾದ್ದು ಸಾಕಷ್ಟಿದೆ. ವ್ಯಾಪಾರ, ಸಂಪತ್ತು ಸೃಷ್ಟಿ, ಜನರ ಜೀವನ ಮಟ್ಟ ಸುಧಾರಿಸುವತ್ತ ಚೀನಾ ಪ್ರಮುಖವಾಗಿ ಗಮನ ಹರಿಸುತ್ತದೆ ಎಂದು ಹೇಳಿದರು.
ಉಗ್ರಗಾಮಿ ಸಂಘಟನೆಗಳೊಂದಿಗೆ ಸೇನೆ ಯಾವಾಗಲೂ ಸಂಪರ್ಕ ಹೊಂದಿತ್ತು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಪ್ಪೊಪ್ಪಿಕೊಂಡಿದ್ದಾರೆ. ಆಘ್ಘಾನಿಸ್ತಾನದ ಮೇಲೆ ಯುದ್ಧ ಸಾರಲು ತಮ್ಮ ದೇಶದ ಸೇನೆ ಮತ್ತು ಪತ್ತೇದಾರಿ ಗುಪ್ತಚರ ಆಂತರಿಕ ಇಲಾಖೆ(ಐಎಸ್ಐ) ಅಲ್ ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡಿದ್ದವು ಎಂದು ಹೇಳಿದರು.
ಪಾಕಿಸ್ತಾನ ಸೇನೆ ಮತ್ತು ಐಎಸ್ಐ, ಅಲ್ ಖೈದಾ ಸಂಘಟನೆಗೆ ಆಫ್ಘಾನಿಸ್ತಾನದಲ್ಲಿ ಯುದ್ಧ ಮಾಡಲು ಪಾಕಿಸ್ತಾನದಲ್ಲಿಯೇ ತರಬೇತಿ ನೀಡಲಾಯಿತು. ಹೀಗಾಗಿ ಸಹಜವಾಗಿ ಅವುಗಳ ಮಧ್ಯೆ ಸಂಪರ್ಕಗಳಿದ್ದವು. ಯಾವಾಗ ನಾವು ಈ ಉಗ್ರಗಾಮಿ ಸಂಘಟನೆಗಳ ವಿರುದ್ಧ ನಿಂತೆವೋ ಆಗ ಪ್ರತಿಯೊಬ್ಬರೂ ನಮ್ಮನ್ನು ಬೆಂಬಲಿಸಲಿಲ್ಲ. ಸೇನೆಯೊಳಗೆ ಸಹ ಭಿನ್ನಾಭಿಪ್ರಾಯ ಕೇಳಿಬಂತು. ಹೀಗಾಗಿ ಪಾಕಿಸ್ತಾನದೊಳಗೆ ಆಂತರಿಕ ಕಲಹಗಳು ನಡೆದವು ಎಂದು ಹೇಳಿದ್ದಾರೆ.