ನ್ಯೂಯಾರ್ಕ್, ಸೆ.24(Daijiworld News/SS): ವಿಶ್ವಸಂಸ್ಥೆ ಸಾಮಾನ್ಯ ಸಭೆಗಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಾಗೆ ಆಗಮಿಸಿದ್ದು, ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ.
ಆರ್ಥಿಕ ವಿಚಾರ, ವಾಣಿಜ್ಯ ಸಂಬಂಧ, ಕಾಶ್ಮೀರ ವಿವಾದಗಳೂ ಸೇರಿದಂತೆ ಇಮ್ರಾನ್ ಖಾನ್ ಮತ್ತು ಟ್ರಂಪ್ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಟ್ರಂಪ್ ತಾವು ಕಾಶ್ಮೀರ ವಿಚಾರವಾಗಿ ಪರಿಣಾಮಕಾರಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ. ಕಾಶ್ಮೀರ ವಿಷಯದ ಬಗ್ಗೆ ಮಧ್ಯಸ್ಥಿಕೆ ವಹಿಸಲು ನನಗೆ ಅವಕಾಶ ಸಿಕ್ಕರೆ ನಾನದಕ್ಕೆ ಸಿದ್ದವಾಗಿದ್ದೇನೆ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರ ವಿವಾದ ಒಂದು ಸಂಕೀರ್ಣ ವಿಷಯವಾಗಿದೆ. ಇದು ಬಹಳ ಸಮಯದಿಂದ ನಡೆಯುತ್ತಿದೆ. ಆದರೆ ಇಬ್ಬರೂ ಒಪ್ಪಿದರೆ (ಭಾರತ ಹಾಗೂ ಪಾಕಿಸ್ತಾನ) ನಾನು ಮಧ್ಯಸ್ಥಗಾರನ ಕೆಲಸ ಮಾಡಲು ಸಿದ್ದನಿದ್ದೇನೆ. ಭಾರತ ಹಾಗೂ ಪಾಕ್ ಎರಡೂ ಕೂಡ ದೊಡ್ಡ ದೇಶಗಳು. ಉಭಯ ದೇಶಗಳು ಶೀಘ್ರದಲ್ಲೇ ಈ ವಿಚಾರವನ್ನು ಬಗೆಹರಿಸಿಕೊಳ್ಳಲಿವೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ಮೋದಿಯವರ ಭಾಷಣದ ವೇಳೆ ಆಕ್ರಮಣಕಾರಿ ಹೇಳಿಕೆಗಳನ್ನು ಕೇಳಿಸಿಕೊಂಡಿದ್ದೇನೆ. ಪಾಕಿಸ್ತಾನದಲ್ಲಿನ ಉಗ್ರತ್ವದ ವಿಚಾರವಾಗಿ ಮೋದಿ ಅಗ್ರೆಸ್ಸಿವ್ ಆಗಿ ಮಾತನಾಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಖಾನ್ ಮತ್ತು ಮೋದಿ ಸೆಪ್ಟೆಂಬರ್ 27 ರಂದು ಯುಎನ್ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.