ಹ್ಯೂಸ್ಟನ್, ಸೆ.23(Daijiworld News/SS): ಭಾರತ ಒಂದು ದೇಶವಲ್ಲ, ಅದು ಅತ್ಯಂತ ಮಹತ್ವದ ಸ್ನೇಹರಾಷ್ಟ್ರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಶ್ರೇಷ್ಠ ವ್ಯಕ್ತಿ. ಅವರು ನನ್ನ ಸ್ನೇಹಿತರು. ಸದಾ ಕ್ರಿಯಾಶೀಲರಾಗಿರುವ ಮೋದಿ 30 ಕೋಟಿ ಭಾರತೀಯರನ್ನು ಬಡತನದಿಂದ ಮೇಲೆತ್ತಿದ್ದಾರೆ. ಭಾರತ ಒಂದು ದೇಶವಲ್ಲ, ಅದು ಅತ್ಯಂತ ಮಹತ್ವದ ಸ್ನೇಹರಾಷ್ಟ್ರ ಎಂದು ಹೇಳಿದ್ದಾರೆ.
ವಿಶೇಷವೆಂದರೆ, ಕಾಶ್ಮೀರ ಸಮಸ್ಯೆ ಬಗೆಹರಿಸಲು ಭಾರತ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವುದಾಗಿ ಪದೇಪದೆ ಹೇಳುತ್ತಿದ್ದ ಟ್ರಂಪ್ ತಮ್ಮ ಭಾಷಣದಲ್ಲಿ ಕಾಶ್ಮೀರದ ಬಗ್ಗೆ ಚಕಾರ ಎತ್ತಲಿಲ್ಲ. ಆದರೆ ಅಮೆರಿಕದಂತೆ ತನ್ನ ಗಡಿಯನ್ನು ರಕ್ಷಿಸಿಕೊಳ್ಳಲು ಭಾರತಕ್ಕೂ ಹಕ್ಕಿದೆ ಎಂದಷ್ಟೇ ಪರೋಕ್ಷವಾಗಿ ಹೇಳಿದರು.
ಇನ್ನೂ ಹೌಡಿ ಮೋದಿ ಕಾರ್ಯಕ್ರಮ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅಮೆರಿಕ ಅಧ್ಯಕ್ಷರು ಅಧಿಕೃತವಾಗಿ ಬಳಸುವ ಅಮೆರಿಕ ರಾಷ್ಟ್ರಧ್ವಜವಿರುವ ಅಧಿಕೃತ ವೇದಿಕೆಯನ್ನು ಬದಲಾಗಿ ಭಾರತ ಮತ್ತು ಅಮೆರಿಕದ ರಾಷ್ಟ್ರಧ್ವಜಗಳಿದ್ದ ವೇದಿಕೆಯಲ್ಲೇ ಭಾಷಣ ಮಾಡಿದ್ದಾರೆ. ಭಾರತ ಮತ್ತು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಮಹತ್ವವನ್ನು ಸಾರಲು ಟ್ರಂಪ್ ಮಾಡಿದ ಪ್ರಯತ್ನವಿದು ಎಂದು ಇದನ್ನು ವಿಶ್ಲೇಷಿಸಲಾಗುತ್ತಿದೆ.