ಅಮೆರಿಕಾ, ಸೆ 22 (Daijiworld News/RD): 'ಹೌಡಿ ಮೋದಿ' ಕಾರ್ಯಕ್ರಮದ ನಿಮಿತ್ತ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹ್ಯೂಸ್ಟನ್ ವಿಮಾನ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಸಾರಿದ್ದು, ಮೋದಿಯವರ ಸರಳತೆಗೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿವೆ.
ಅಮೆರಿಕಾ ಪ್ರವಾಸದಲ್ಲಿರುವ ಮೋದಿಯವರನ್ನು ಇಂದು ಹ್ಯೂಸ್ಟನ್ ಜಾರ್ಜ್ ಬುಷ್ ಇಂಟರ್ ಕಾಂಟಿನೆಂಟರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ವೇಳೆ ಭಾರತದಲ್ಲಿನ ಅಮೆರಿಕಾ ರಾಯಭಾರಿ ಕೆನ್ನೆತ್ ಜಸ್ಟರ್, ಅಮೆರಿಕಾದಲ್ಲಿನ ಭಾರತದ ರಾಯಭಾರಿ ಹರ್ಷವರ್ಥನ್ ಶ್ರಿಂಗಾಲಾ ಮತ್ತಿತರರ ಅಧಿಕಾರಿಗಳು ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಬಳಿಕ ಭಾರತೀಯ ಮತ್ತು ಅಮೆರಿಕಾ ಅಧಿಕಾರಿಗಳಿಗೆ ಹಸ್ತಲಾಘವ ನೀಡುತ್ತಾ ಬರುತ್ತಿದ್ದ ವೇಳೆ ಮಹಿಳಾ ಅಧಿಕಾರಿಯೊರ್ವರು ಹೂಗುಚ್ಛ ನೀಡಿದರು. ಈ ವೇಳೆ ಹೂಗುಚ್ಛದ ಸಣ್ಣ ಭಾಗವೊಂದು ತುಂಡಾಗಿ ನೆಲದ ಮೇಲೆ ಬಿದ್ದಿತ್ತು. ಇದನ್ನು ಕಂಡ ಪ್ರಧಾನಿ ಮೋದಿಯವರು ಕೂಡಲೇ ಆ ಕಸವನ್ನು ಎತ್ತಿ ಭದ್ರತಾ ಸಿಬ್ಬಂದಿಯವರಿಗೆ ನೀಡಿ, ಅಧಿಕಾರಿಗಳನ್ನು ಪರಿಚಯ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರೆಸಿದರು.
ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನದ ಮೂಲಕ ಗಮನ ಸೆಳೆದಿರುವ ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದಲ್ಲಿಯೂ ಸ್ವಚ್ಛತೆಯ ಪ್ರಾಮುಖ್ಯತೆಯನ್ನು ತೋರಿಸಿ ಸರಳತೆ ಮೆರೆದ ಮೋದಿಗೆ ಪ್ರಶಂಸೆಗೆ ಪಾತ್ರರಾಗಿದ್ದು, ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಮೋದಿಯ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.