ವಾಷಿಂಗ್ಟನ್, ಸೆ.21(Daijiworld News/SS): ಇರಾನ್ನೊಂದಿಗೆ ಸಂಪೂರ್ಣ ಯುದ್ಧವನ್ನು ನಡೆಸುವ ಇಚ್ಛೆ ನಮಗಿಲ್ಲ. ಆದಷ್ಟು ಸಂಯಮದಿಂದ ವರ್ತಿಸುವುದು ಹಾಗೂ ಸಮಾಧಾನವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಬಯಕೆ ನಮ್ಮದಾಗಿದೆ. ಆದರೂ ಆ ಪ್ರದೇಶದಲ್ಲಿನ ಭದ್ರತೆ ದೃಷ್ಟಿಯಿಂದ ಸೇನಾಪಡೆಯನ್ನು ನಿಯೋಜಿಸಲಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸೌದಿ ಅರೇಬಿಯಾದ ಅತಿದೊಡ್ಡ ತೈಲಾಗಾರದ ಮೇಲೆ ಡ್ರೋಣ್ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಅಮೆರಿಕ ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ಗೆ (ಯುಎಇ) ಅಮೆರಿಕ ತನ್ನ ಹೆಚ್ಚುವರಿ ಸೇನೆಯನ್ನು ಕಳುಹಿಸಿದೆ. ಅಲ್ಲದೆ, ಮಧ್ಯಪ್ರಾಚ್ಯದ ಉಭಯ ರಾಷ್ಟ್ರಗಳಲ್ಲಿ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಜಾಗೃತಗೊಳಿಸಿದೆ. ಆದರೆ, ತೈಲಾಗಾರದ ಮೇಲೆ ದಾಳಿ ನಡೆಸಿರುವ ಅನುಮಾನದ ಸಂಕೋಲೆಗೆ ಸಿಲುಕಿರುವ ಇರಾನ್ ಮೇಲೆ ತಕ್ಷಣವೇ ದಾಳಿ ಮಾಡದಿರಲು ನಿರ್ಧರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಈ ಪ್ರದೇಶದಲ್ಲಿ ಹೆಚ್ಚುವರಿ ಭದ್ರತೆ ಏರ್ಪಡಿಸುವ ಮೊದಲ ಹೆಜ್ಜೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ಆ ಪ್ರದೇಶಕ್ಕೆ ಹೆಚ್ಚುವರಿ ಸೇನೆ ರವಾನಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಪೇಟ್ರಿಯಾಟ್ ಕ್ಷಿಪಣಿಗಳಲ್ಲದೆ ಅತ್ಯಾಧುನಿಕ ರಡಾರ್ಗಳು ಸೇರಿ ಅಪಾರ ಪ್ರಮಾಣದ ಯುದ್ಧೋಪಕರಣಗಳನ್ನು ಅಮೆರಿಕ ಮಧ್ಯಪ್ರಾಚ್ಯದ ಎರಡು ರಾಷ್ಟ್ರಗಳಿಗೆ ರವಾನಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಯೋಧರನ್ನು ಅಲ್ಲಿ ನಿಯೋಜಿಸಲಾಗುತ್ತಿದೆ ಎಂದು ಅಮೆರಿಕದ ರಕ್ಷಣಾ ವಿಭಾಗದ ಅಧಿಕಾರಿ ಮೂಲಗಳು ಹೇಳಿವೆ.