ಯುನೈಟೆಡ್ ನೇಷನ್ಸ್, ಸೆ.20(Daijiworld News/SS): ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದ ಪಾಕಿಸ್ತಾನಕ್ಕೆ ದ್ವೇಷದ ಮಾತುಗಳನ್ನಾಡುವುದೇ ಮುಖ್ಯವಾಗಿಬಿಟ್ಟಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ದೇಶದ ವಿಚಾರದಲ್ಲಿ ಜಾಗತಿಕ ವೇದಿಕೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ದೇಶಗಳು ಅರ್ಥ ಮಾಡಿಕೊಳ್ಳಬೇಕು, ಪಾಕಿಸ್ತಾನ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪಿಸಿದರೆ ಅದರ ಮಟ್ಟ ಕೆಳಗಿಳಿಯುತ್ತದೆ, ಭಾರತ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಪ್ರಧಾನ ಮಂತ್ರಿಗಳು ನಡೆಸುವ ಸಭೆಗಳು, ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಭಾರತದ ಸ್ಥಾನ ವಿಶ್ವಸಂಸ್ಥೆಯಲ್ಲಿ ಹೆಚ್ಚಾಗುತ್ತದೆ ಎಂದು ಹೇಳಿದರು.
ಪಾಕಿಸ್ತಾನ ಏನು ಮಾಡುತ್ತದೆ ಎಂಬುದು ಅದಕ್ಕೆ ಬಿಟ್ಟದ್ದು. ಪಾಕಿಸ್ತಾನ ಹೇಗೆ ಭಯೋತ್ಪಾದನೆಯ ತಾಣವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಈಗ ದ್ವೇಷದ ಮಾತುಗಳ ಮೂಲಕ ತಮ್ಮ ಸ್ಥಾನಮಾನವನ್ನು ಕೆಳಹಂತಕ್ಕೆ ತರಬೇಕೆಂದರೆ ತಂದುಕೊಳ್ಳಲಿ ಅದು ಅವರ ಇಷ್ಟ, ದ್ವೇಷ, ವಿಷಯ ಮಾತುಗಳು, ಬರಹಗಳು ಹೆಚ್ಚು ಸಮಯ ಬಾಳುವುದಿಲ್ಲ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದ್ದು ಅದರಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಅಂದೇ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ವಿಶ್ವಸಂಸ್ಥೆಯಲ್ಲಿ ಮಾತನಾಡುವ ಸಾಧ್ಯತೆಯಿದೆ.