ಇಸ್ಲಾಮಬಾದ್, ಸೆ 19 (DaijiworldNews/SM): ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದಕ್ಕೆ ಪಾಕಿಸ್ಥಾನ ವಿರೋಧ ವ್ಯಕ್ತಪಡಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪಾಕ್ ಪ್ರಧಾನಿ ಭಾರತಕ್ಕೆ ಚಾಟಿ ಬೀಸಿದ್ದಾರೆ.
ಕಾಶ್ಮೀರ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಈ ಸಂದರ್ಭದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಜಮ್ಮುವಿನಲ್ಲಿ ಹೇರಿರುವ ಕರ್ಫ್ಯೂ ಹಿಂಪಡೆಯಬೇಕು. ಹಾಗೂ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡಬೇಕೆಂದು ಹೇಳಿದ್ದಾರೆ. ಇದು ಆಗದ ಹೊರತು ಭಾರತದೊಂದಿಗೆ ಯಾವುದೇ ಕಾರಣಕ್ಕೂ ಮಾತುಕತೆ ನಡೆಸುವುದಿಲ್ಲ. ಹಾಗೂ ಮಾತುಕತೆಗೆ ಯಾವುದೇ ಬೆಲೆ ಇಲ್ಲ ಎಂದಿದ್ದಾರೆ.
ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಬಳಿಕ ಕಾಶ್ಮೀರದಲ್ಲಿ ಕಳೆದ 45 ದಿನಗಳಿಂದ ಕರ್ಫ್ಯೂ ಹೇರಲಾಗಿದೆ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ. ಪಾಕಿಸ್ತಾನದ ಯಾರಾದರೂ ಕಾಶ್ಮೀರದಲ್ಲಿ ಹೋರಾಡಲು ಅಥವಾ ಕಾಶ್ಮೀರದಲ್ಲಿ ಜಿಹಾದ್ಗೆ ಹೋಗಲು ಬಯಸಿದರೆ ಅವರು ಕಾಶ್ಮೀರಿಗಳಿಗೆ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಇಂತಹ ಕೃತ್ಯವು ಕಾಶ್ಮೀರಿಗಳ ವಿರುದ್ಧದ ದ್ವೇಷದ ಕಾರ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.