ನ್ಯೂಯಾರ್ಕ್, ಸೆ.19(Daijiworld News/SS): ವಿಕ್ರಂ ಲ್ಯಾಂಡರ್'ನ ನಿಖರವಾದ ಸ್ಥಳವನ್ನು ಪತ್ತೆ ಹಚ್ಚುವುದು ಕಷ್ಟ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
ವಿಕ್ರಂ ಲ್ಯಾಂಡರ್ ಈಗಿರುವ ಸ್ಥಳದಲ್ಲಿ ಬೆಳಕು ಸ್ಪಷ್ಟವಾಗಿಲ್ಲ. ಹೀಗಾಗಿ ಲ್ಯಾಂಡರ್'ನ ನಿಖರವಾದ ಸ್ಥಳವನ್ನು ಪತ್ತೆಹಚ್ಚುವುದು ಕಷ್ಟವಾಗಿದೆ. ವಿಕ್ರಂ ಲ್ಯಾಂಡಿಂಗ್ ಎಲ್ಲಿ ಆಗಿದೆ ಎಂದು ತಿಳಿದುಕೊಳ್ಳಲು ಮುಂದಿನ ಅಕ್ಟೋಬರ್ 14ಕ್ಕೆ ಇನ್ನೊಂದು ಚಿತ್ರ ಸಿಗುವ ಸಾಧ್ಯತೆಯಿದೆ. ಅಂದು ಎಲ್ಆರ್'ಒ ಚಂದ್ರನ ಆ ಪ್ರದೇಶದ ಮೂಲಕ ಹಾದುಹೋಗುತ್ತದೆ ಎಂದು ಎಲ್ಆರ್'ಒ ಪ್ರಾಜೆಕ್ಟ್ ವಿಜ್ಞಾನಿಗಳು ಹೇಳಿದ್ದಾರೆ.
ಚಂದ್ರನ ಮೇಲ್ಮೈಯನ್ನು ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಪ್ರದೇಶದಲ್ಲಿ ನಾಸಾದ ಲೂನಾರ್ ರಿಕನ್ನೈಸನ್ಸ್ ಆರ್ಬಿಟರ್ ಕ್ಯಾಮರಾ ಸಹಾಯದಿಂದ ಚಿತ್ರಗಳನ್ನು ತೆಗೆಯಲಾಗಿದ್ದರೂ ಕೂಡ ಅಲ್ಲಿನ ಬೆಳಕು ಸ್ಥಿತಿಗತಿ ಸ್ಪಷ್ಟವಾಗಿಲ್ಲದ ಕಾರಣ ವಿಕ್ರಂ ಲ್ಯಾಂಡರ್'ನ ಸ್ಥಾನ ಸದ್ಯಕ್ಕೆ ಎಲ್ಲಿದೆ ಎಂದು ಗುರುತುಹಿಡಿಯುವುದು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಎಲ್ಆರ್'ಒ ಹಾದು ಹೋದ ಸಮಯ ಮುಸ್ಸಂಜೆ ಹೊತ್ತಾಗಿತ್ತು. ಆ ಪ್ರದೇಶದಲ್ಲಿ ದಟ್ಟ ಕತ್ತಲು ಕವಿದಿತ್ತು. ಎಲ್ಆರ್'ಒಸಿ ನಿಗದಿತ ಲ್ಯಾಂಡಿಂಗ್ ಪ್ರದೇಶದ ಸುತ್ತಮುತ್ತ ದೊಡ್ಡ ಚಿತ್ರವನ್ನು ತೆಗೆದಿದ್ದರೂ ಕೂಡ ವಿಕ್ರಂ ಲ್ಯಾಂಡಿಂಗ್'ನ ನಿರ್ದಿಷ್ಟ ಸ್ಥಳದ ಗುರುತು ಸಿಕ್ಕಿಲ್ಲ ಎಂದು ನಾಸಾ ಹೇಳಿದೆ.