ಬ್ರಸೆಲ್ಸ್, ಸೆ.19(Daijiworld News/SS): ಗಡಿ ನಿಯಂತ್ರಣ ರೇಖೆಯಿಂದ ಪಾಕಿಸ್ತಾನ ಭಯೋತ್ಪಾದನೆ ನಡೆಸುತ್ತಿದೆ ಎಂದು ಯುರೋಪಿಯನ್ ಸಂಸತ್ತಿನ ಸಚಿವರು (ಎಂಇಪಿ) ಪಾಕಿಸ್ತಾನವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಶ್ವಸಂಸ್ಥೆಯ ಬಳಿಕ ಈಗ ಐರೋಪ್ಯ ಒಕ್ಕೂಟ ಕೂಡ ಭಾರತದ ಪರವಾಗಿ ನಿಂತಿದ್ದು, ಕಾಶ್ಮೀರ ವಿಚಾರವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಲಹೆ ನೀಡಿದೆ. ಈ ಕುರಿತು ಮಾತನಾಡಿರುವ ಯುರೋಪಿಯನ್ ಕನ್ಸರ್ವೆಟಿವ್ಸ್ ಆಂಡ್ ರಿಫಾರ್ವಿುಸ್ಟ್ ಗುಂಪಿನ ಜೆಫ್ರಿ ವಾನ್ ಒರ್ಡೆನ್, ಜಮ್ಮು- ಕಾಶ್ಮೀರದ ಕೆಲ ಭಾಗಗಳನ್ನು ಇಸ್ಲಾಮಾಬಾದ್ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ದೂರಿದ್ದಾರೆ.
370ನೇ ವಿಧಿಯ ರದ್ದತಿ ಭಾರತದ ಆಂತರಿಕ ವಿಚಾರ. ಭಾರತದ ಸಾರ್ವಭೌಮತ್ವವನ್ನು ಗೌರವಿಸುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿದ್ದಾರೆ. ಎಲ್ಒಸಿಯಲ್ಲಿ ‘ದಬ್ಬಾಳಿಕೆ ಮತ್ತು ಭಯೋತ್ಪಾದನೆಗೆ’ ಬೆಂಬಲ ನೀಡಲು ಪಾಕಿಸ್ತಾನ ಅವಕಾಶ ನೀಡಿದೆ ಎಂದು ಹೇಳಿದರು.
ಐಡೆಂಟಿಟಿ ಆಂಡ್ ಡೆಮಾಕ್ರಸಿ ಗ್ರೂಪ್ನ ಬರ್ನ್ಹಾರ್ಡ್ ಅವರು ಈ ವಿಚಾರವಾಗಿ ಮಾತನಾಡಿ, ಯುರೋಪಿಯನ್ ಒಕ್ಕೂಟ ಒಂದು ‘ಅಲಿಪ್ತ ಪಾತ್ರ’ ನಿರ್ವಹಿಸಬೇಕು. ಯಾರ ಪರ ವಹಿಸಬಾರದು ಎಂದು ಹೇಳಿದರು. ಮಾತ್ರವಲ್ಲ, ಜಮ್ಮು-ಕಾಶ್ಮೀರಕ್ಕೆ ಸಾವಿರಾರು ಸೈನಿಕರನ್ನು ಕಳಿಸಿರುವುದರಿಂದ ಪರಿಸ್ಥಿತಿ ಹದಗೆಡುತ್ತಿದೆ ಎಂದು ಬೆಲ್ಜಿಯಂ ನಾಯಕ ಮೇರಿ ಅರೆನಾ ಅಭಿಪ್ರಾಯಪಟ್ಟಿದ್ದಾರೆ.