ಇಸ್ಲಾಮಾಬಾದ್, ಸೆ.18(Daijiworld News/SS): ಭಾರತ ಬೇಜವಾಬ್ದಾರಿ ಹಾಗೂ ಯುದ್ಧೋನ್ಮಾದ ಪ್ರದರ್ಶಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗ. ಮುಂದೊಂದು ದಿನ ಪಿಒಕೆ ಮೇಲೆ ಭಾರತ ಕಾನೂನು ಬದ್ಧವಾಗಿಯೇ ಹಕ್ಕು ಹೊಂದಲಿದೆ ಎಂಬ ಭಾರತದ ಹೇಳಿಕೆಗೆ ತಿರುಗೇಟು ನೀಡಿರುವ ಪಾಕಿಸ್ತಾನ, ಭಾರತ ಬೇವಾಬ್ದಾರಿ ಹಾಗೂ ಯುದ್ಧೋನ್ಮಾದ ಪ್ರದರ್ಶಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದೆ. ಇಂತಹ ಹೇಳಿಕೆಗಳು ಕಾಶ್ಮೀರದಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಕಾಶ್ಮೀರದಲ್ಲಿನ ಶಾಂತಿ ಹಾಗೂ ಸುರಕ್ಷತೆಯನ್ನು ಗಂಭೀರ ರೀತಿಯಲ್ಲಿ ಅಪಾಯಕ್ಕೆ ತಳ್ಳುತ್ತಿದೆ ಎಂದು ಹೇಳಿದೆ.
ವಿದೇಶಾಂಗ ಸಚಿವ ಜೈಶಂಕರ್ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕುರಿತಂತೆ ಭಾರತ ಸ್ಪಷ್ಟ ನಿಲುವು ಹೊಂದಿದೆ. ಭವಿಷ್ಯದಲ್ಲಿ ಭಾರತ ಪಿಒಕೆ ಮೇಲೆ ನ್ಯಾಯಯುತವಾಗಿ ಹಕ್ಕು ಹೊಂದಲಿದೆ. ಪಿಒಕೆ ಎಂದಿಗೂ ನಮ್ಮ ದೇಶದ ಭಾಗ. ಅದನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು.
ಇದೀಗ ಭಾರತದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಜಾಗತಿಕ ಸಮುದಾಯಕ್ಕೆ ಪಾಕಿಸ್ತಾನ ಆಗ್ರಹಿಸಿದೆ.