ಯುನೈಟೆಡ್ ನೇಷನ್ಸ್, ಸೆ.13(Daijiworld News/SS): ಕಾಶ್ಮೀರದ ಬಗ್ಗೆ ಆಧಾರರಹಿತ ಮತ್ತು ಕಪಟ ವಿಷಯಗಳನ್ನು ಹರಡುವ ಮೂಲಕ ವಿಶ್ವಸಂಸ್ಥೆಯ ವೇದಿಕೆಯನ್ನು ಪಾಕಿಸ್ತಾನ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಭಾರತ ಆರೋಪಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವ ಪಾಕಿಸ್ತಾನಕ್ಕೆ ಸರಿಯಾದ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯಲ್ಲಿ ನಡೆಯುತ್ತಿರುವ ಭದ್ರತಾ ಮಂಡಳಿ 2018ರ ವರದಿಯ ಸಾಮಾನ್ಯ ಸಭೆಯಲ್ಲಿ ವಿಶ್ವಸಂಸ್ಥೆಯ ಪಾಕಿಸ್ತಾನ ರಾಯಭಾರಿ ಮಲೀಹಾ ಲೊಧಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವ ಭಾರತದ ಕ್ರಮ ಬಹು ಭದ್ರತಾ ಮಂಡಳಿಯ ನಿರ್ಣಯಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಲೊಧಿ ಆಕ್ಷೇಪಿಸಿದರು.
ಈ ವೇಳೆ ವಿಶ್ವಸಂಸ್ಥೆ ಶಾಶ್ವತ ಮಿಷನ್'ನ ಭಾರತದ ಮೊದಲ ಕಾರ್ಯದರ್ಶಿ ಸಂದೀಪ್ ಕುಮಾರ್ ಬಯಾಪು ಪ್ರತಿಕ್ರಿಯಿಸಿ, ವಿಶ್ವಸಂಸ್ಥೆಯ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಒಂದು ನಿಯೋಗ ಸತತ ಪ್ರಯತ್ನಿಸುತ್ತಿದೆ. ನಮ್ಮ ದೇಶದ ಬಗ್ಗೆ ಸುಳ್ಳು, ಆಧಾರರಹಿತ ಮೋಸದ ಸುದ್ದಿಗಳನ್ನು ಪ್ರಚಾರ ಮಾಡುತ್ತಿದೆ. ಅದರಲ್ಲಿ ಯಶಸ್ಸು ಕಾಣಬಹುದು ಎಂದು ಅದು ಭಾವಿಸಿಕೊಂಡರೆ ತಪ್ಪು ಎಂದು ಹೇಳಿದ್ದಾರೆ.
ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರವಾಗಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ. ಭಯೋತ್ಪಾದನೆ ಮೂಲಕ ನಮ್ಮ ದೇಶದ ಮುಗ್ಧ ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ. ಅಂತವರ ಆರೋಪಗಳಿಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.