ಇಸ್ಲಾಮಬಾದ್, ಸೆ 12 (Daijiworld News/MSP): ಬೇಹುಗಾರಿಕೆ ಮತ್ತು ಭಯೋತ್ಪಾದನೆಯ ಆರೋಪದಲ್ಲಿ ಕಳೆದ 3 ವರ್ಷಗಳಿಂದ ಪಾಕಿಸ್ತಾನದ ಸೆರೆಯಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಯೋಧ ಕುಲಭೂಷಣ್ ಜಾಧವ್ ಗೆ 2ನೇ ಬಾರಿ ರಾಜತಾಂತ್ರಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.
ಜಾಧವ್ ರಾಜತಾಂತ್ರಿಕ ನೆರವು ಕುರಿತಂತೆ ಘೋಷಣೆ ಮಾಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್, ಕುಲಭೂಷಣ್ ಜಾಧವ್ ಗೆ 2ನೇ ಬಾರಿ ರಾಜತಾಂತ್ರಿಕ ನೆರವು ನೀಡುವ ಯಾವುದೇ ಅವಕಾಶಗಳಿಲ್ಲ ಎಂದು ಹೇಳಿದ್ದಾರೆ.
ನೆದರ್ಲೆಂಡ್ಸ್ನ ಹೇಗ್ ನಗರದಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ಜುಲೈ ತಿಂಗಳಲ್ಲಿ ನೀಡಿದ್ದ ತೀರ್ಪಿನಲ್ಲಿ ಕುಲಭೂಷಣ್ ಜಾಧವ್ಗೆ ಆದಷ್ಟೂ ಶೀಘ್ರದಲ್ಲಿ ರಾಜತಾಂತ್ರಿಕ ಸಂಪರ್ಕ ಕಲ್ಪಿಸುವಂತೆ ಪಾಕಿಸ್ತಾನಕ್ಕೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಆಗಸ್ಟ್ ನಲ್ಲಿ ಜಾಧವ್ ಗೆ ರಾಜತಾಂತ್ರಿಕ ನೆರವು ನೀಡಲು ಮುಂದಾಗಿದ್ದ ಪಾಕಿಸ್ತಾನ ಕೆಲವು ಷರತ್ತುಗಳನ್ನು ವಿಧಿಸಿತ್ತು. ಇದಕ್ಕೆ ಭಾರತ ಒಪ್ಪಿಕೊಂಡಿಲ್ಲ. ಬೇಷರತ್ ಆಗಿ ಕುಲಭೂಷಣ್ ಜಾಧವ್ಗೆ ರಾಜತಾಂತ್ರಿಕ ಸಂಪರ್ಕದ ಅವಕಾಶ ಮಾಡಿಕೊಡಬೇಕೆಂಬುದು ಭಾರತದ ನಿಲುವಾಗಿತ್ತು. ಬಳಿಕ ಸೆ.1 ರಂದು ಮೊದಲ ಬಾರಿಗೆ ರಾಜತಾಂತ್ರಿಕ ನೆರವು ನೀಡುವುದಾಗಿ ಘೋಷಣೆ ಮಾಡಿತ್ತು. ಜಾಧವ್"ಗೆ ವಿಯೆನ್ನಾ ಕನ್ವೆನ್ಷನ್ ಪ್ರಕಾರ ಸೆ.2 ರಂದು ರಾಜತಾಂತ್ರಿಕ ನೆರವನ್ನು ನೀಡಲಾಗುತ್ತಿದೆ ಎಂದು ಘೋಷಣೆ ಮಾಡಿತ್ತು