ಜೆನೆವಾ, ಸೆ.11(Daijiworld News/SS): ಜಮ್ಮು-ಕಾಶ್ಮೀರವನ್ನು ಅತಿ ದೊಡ್ಡ ಜೈಲನ್ನಾಗಿ ಪರಿವರ್ತಿಸಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ ಆರೋಪಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಮೂಲ ಸೌಲಭ್ಯಗಳನ್ನೂ ಜನತೆಗೆ ನಿರಾಕರಿಸಲಾಗುತ್ತಿದೆ. ಜಮ್ಮು-ಕಾಶ್ಮೀರವನ್ನು ಅತಿ ದೊಡ್ಡ ಜೈಲನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿ ರಾಜಕೀಯ ನಾಯಕರನ್ನು ಕಳೆದ 6 ವಾರಗಳಿಂದ ಬಂಧಿಸಿಡಲಾಗಿದೆ. ಜೀವ ಹಾನಿ ತಡೆಯುವುದಕ್ಕೆ ಜಮ್ಮು-ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ದೂರಿದ್ದಾರೆ.
ಜಮ್ಮು-ಕಾಶ್ಮೀರದ ವಿಷಯವನ್ನು ಪಾಕಿಸ್ತಾನ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ (ಯುಎನ್ ಹೆಚ್ ಆರ್ ಸಿ)ದಲ್ಲಿ ಪ್ರಸ್ತಾಪಿಸಿದ್ದು, ಕಾಶ್ಮೀರದ ಪರಿಸ್ಥಿತಿ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಆಗ್ರಹಿಸಿದೆ. ಈಗಾಗಲೇ ವಿಶ್ವಸಂಸ್ಥೆ ಮಾನವ ಹಕ್ಕುಗಳ ಪರಿಷತ್ ನ 42 ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ತನ್ನ ನಿಷ್ಕ್ರಿಯತೆಯಿಂದ ವಿಶ್ವಸಂಸ್ಥೆ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಬಾರದು ಎಂದು ಹೇಳಿದ್ದಾರೆ.
ಕಾಶ್ಮೀರ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆ ಮಾನವಹಕ್ಕುಗಳ ಸಂಸ್ಥೆ ಸಂಬಂಧವೇ ಇಲ್ಲದಂತೆ ಇರಬಾರದು, ಕಾಶ್ಮೀರ ಜನತೆಗೆ ನ್ಯಾಯ ಒದಗಿಸುವುದಕ್ಕಾಗಿ ನಾನು ವಿಶ್ವಸಂಸ್ಥೆ ಕದ ತಟ್ಟಿದ್ದೇನೆ. ಪೆಲೆಟ್ ಗನ್'ಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು. ತಕ್ಷಣವೇ ಕರ್ಫ್ಯೂ ತೆಗೆಯಬೇಕು, ಮೂಲಭೂತ ಹಕ್ಕುಗಳನ್ನು ಮರುಸ್ಥಾಪನೆ ಮಾಡಲು ಭಾರತಕ್ಕೆ ನಿರ್ದೇಶನ ನೀಡಬೇಕೆಂದು ಖುರೇಷಿ ವಿಶ್ವಸಂಸ್ಥೆಗೆ ಮನವಿ ಮಾಡಿದ್ದಾರೆ.