ಜಿನೀವಾ, ಸೆ.11(Daijiworld News/SS): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು ಭಾರತದ ಆಂತರಿಕ ವಿಷಯ. ಕಾಶ್ಮೀರದ ಬಗ್ಗೆ ಮಾತನಾಡುವ ಹಕ್ಕು ಇಸ್ಲಾಮಾಬಾದ್'ಗೆ ಇಲ್ಲ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಭಾರತವು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಸ್ಪಷ್ಟಪಡಿಸಿದೆ.
ಭಾರತ ಜಮ್ಮು ಮತ್ತು ಕಾಶ್ಮೀರದಲ್ಲಿನ ಜನರ ಹಕ್ಕುಗಳನ್ನು ಕಸಿದುಕೊಂಡಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ಭಾರತ ಪ್ರತಿಕ್ರಿಯಿಸಿದ್ದು, ಇಸ್ಲಾಮಾಬಾದ್ ವಾಸ್ತವದಲ್ಲಿ ದುಷ್ಕೃರ್ತ್ಯಗಳ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿಕೊಂಡು, ಬಲಿಪಶುವಿನಂತೆ ಅಳುತ್ತಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಹೇಳಿದೆ.
ಪಾಕಿಸ್ತಾನವು ಭಾರತದ ವಿರುದ್ಧ ಉತ್ಪ್ರೇಕ್ಷೆಯ ಮತ್ತು ದುರುದ್ದೇಶದ ಆರೋಪ ಮಾಡುತ್ತಿದ್ದು, ಪಾಕಿಸ್ತಾನದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಆಂತರಿಕ ತನಿಖೆ ನಡೆಸಬೇಕು ಎಂಬ ಪಾಕಿಸ್ತಾನದ ಬೇಡಿಕೆಯನ್ನು ಕಡೆಗಣಿಸುವಂತೆ ಭಾರತ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ಮನವಿ ಮಾಡಿದೆ.
ಎಂಇಎ ಪೂರ್ವ ವಲಯದ ಕಾರ್ಯದರ್ಶಿ ವಿಜಯ್ ಠಾಕೂರ್ ಸಿಂಗ್ ಯುಎನ್ಹೆಚ್ಆರ್ಸಿ ಸಭೆಯಲ್ಲಿ ಈ ಕುರಿತು ಮಾತನಾಡಿದ್ದು, ಪರಿಷತ್ತಿನಲ್ಲಿ ಮಾನವ ಹಕ್ಕುಗಳನ್ನು ರೂಪಿಸುವ ರಚನಾತ್ಮಕ ವಿಧಾನವನ್ನು ಭಾರತ ದೃಢವಾಗಿ ನಂಬುತ್ತದೆ. ಜಾಗತಿಕವಾಗಿ ಜನರ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ನಾವು ಪ್ರಾಯೋಗಿಕ ಕ್ರಮಗಳನ್ನು ಕಂಡುಹಿಡಿಯಬೇಕಾಗಿದೆ. ಇತರ ದೇಶಗಳಲ್ಲಿ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಬಗ್ಗೆ ಮಾತನಾಡುವವರು, ತಾವೇ ಹಕ್ಕನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.