ಕರಾಚಿ, ಸೆ 09 (Daijiworld News/RD): ಚಂದ್ರಯಾನ-2 ಯೋಜನೆ ಮೂಲಕ ಲ್ಯಾಂಡರ್ ವಿಕ್ರಮ್ ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಯತ್ನವನ್ನು ಪಾಕಿಸ್ತಾನದ ಮೊದಲ ಮಹಿಳಾ ಗಗನಯಾತ್ರಿ ನಮೀರಾ ಸಲೀಂ ಶ್ಲಾಘಿಸಿದ್ದಾರೆ.
ರಾಚಿ ಮೂಲದ ಡಿಜಿಟಲ್ ಸೈನ್ಸ್ ನಿಯತಕಾಲಿಕೆ ಸೈಂಟಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಭಾರತ ಈ ಬಾರಿ ಹೊಸ ಪ್ರಯತ್ನಕ್ಕೆ ಕೈಹಾಕಿತ್ತು. ಇದುವರೆಗೂ ಯಾರೂ ತಲುಪಲಾಗದ ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡರ್ ಅನ್ನು ಇಳಿಸುವ ಪ್ರಯತ್ನ ಮಾಡಿದ್ದು ಐತಿಹಾಸಿಕ ಸಾಧನೆ. ಅದನ್ನು ನಾನು ಅಭಿನಂದಿಸುತ್ತೇನೆ' ಎಂದು ನಮೀರಾ ಸಲೀಂ ಹೇಳಿದ್ದಾರೆ.
ಚಂದ್ರಯಾನ-2 ದಕ್ಷಿಣ ಏಷ್ಯಾದಲ್ಲೇ ದೈತ್ಯ ಉಡಾವಣೆಯಾಗಿದೆ. ಇದು ಬರೀ ಆ ದೇಶಕ್ಕೆ ಮಾತ್ರ ಹೆಮ್ಮೆಪಡುವ ಸಂಗತಿಯಲ್ಲ, ಇಡೀ ಜಗತ್ತೇ ಹೆಮ್ಮೆ ಪಡುವ ವಿಚಾರ. ದಕ್ಷಿಣ ಏಷ್ಯಾದ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿರುವುದು ಗಮನಾರ್ಹ. ಬಾಹ್ಯಾಕಾಶದಲ್ಲಿ ಯಾವುದೇ ರಾಜಕೀಯ ಗಡಿಗಳಿಲ್ಲ, ಹಾಗಾಗಿ ಯಾವ ದೇಶ ಈ ರೀತಿಯ ಸಾಧನೆ ಮಾಡುತ್ತಿದೆ ಅನ್ನೋದು ಮುಖ್ಯವಲ್ಲ. ಭೂಮಿಯ ಮೇಲೆ ನಾವು, ನಮ್ಮನ್ನು ಈ ರಾಜಕೀಯ ವಿಭಜಿಸುತ್ತಾ ಸಾಗುತ್ತೇವೆ. ಆದರೆ ಬಾಹ್ಯಾಕಾಶ ಸಾಧನೆ ನಮ್ಮೆಲ್ಲರನ್ನೂ ಒಗ್ಗೂಡಿಸುವಂತೆ ಮಾಡುತ್ತದೆ ಎಂದರು.
ನಮೀರಾ ಸಲೀಂ ಪಾಕಿಸ್ತಾನದ ಮೊದಲ ಗಗನಯಾತ್ರಿಯಾಗಿದ್ದು, ಜೊತೆಗೆ 2008ರಲ್ಲಿ ಮೌಂಟ್ ಎವರೆಸ್ಟ್ಗಿಂತಲೂ ಹೆಚ್ಚು ಎತ್ತರದಿಂದ ಧುಮುಕಿದ ಏಷ್ಯಾದ ಮೊದಲ ಮಹಿಳಾ ಸ್ಕೈ ಡೈವರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರವಾಗಿದ್ದಾರೆ.