ಇಸ್ಲಾಮಾಬಾದ್, ಸೆ 2 (Daijiworld News/RD): ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಆದೇಶದಂತೆ ಪಾಕ್ ಇಂದು ಕುಲಭೂಷಣ್ ಜಾಧವ್ ಅವರರನ್ನು ಭೇಟಿ ಮಾಡಲು ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
ಅಂತಾರಾಷ್ಟ್ರೀಯ ನ್ಯಾಯಾಲಯವು ಜುಲೈ ತಿಂಗಳಲ್ಲಿ ನೀಡಿದ್ದ ತೀರ್ಪಿನಲ್ಲಿ ಕುಲಭೂಷಣ್ ಜಾಧವ್ಗೆ ಆದಷ್ಟೂ ಶೀಘ್ರದಲ್ಲಿ ರಾಜತಾಂತ್ರಿಕ ಸಂಪರ್ಕ ಕಲ್ಪಿಸುವಂತೆ ಪಾಕಿಸ್ತಾನಕ್ಕೆ ಆದೇಶ ನೀಡಿತ್ತು. ಅದಾಗಿ ಇಷ್ಟು ದಿನವಾದರೂ ಜಾಧವ್ರನ್ನು ಭೇಟಿ ಮಾಡಲು ಭಾರತದ ರಾಯಭಾರಿ ಕಚೇರಿಗೆ ಸಾಧ್ಯವಾಗಿರಲಿಲ್ಲ. ರಾಜತಾಂತ್ರಿಕ ಭೇಟಿಗೆ ಪಾಕಿಸ್ತಾನ ಕೆಲ ಷರತ್ತುಗಳನ್ನೂ ಹಾಕಿತ್ತು. ಇದಕ್ಕೆ ಭಾರತ ಒಪ್ಪಿಕೊಂಡಿಲ್ಲ. ಬೇಷರತ್ ಆಗಿ ಕುಲಭೂಷಣ್ ಜಾಧವ್ಗೆ ರಾಜತಾಂತ್ರಿಕ ಸಂಪರ್ಕದ ಅವಕಾಶ ಮಾಡಿಕೊಡ ಬೇಕೆಂಬುದು ಭಾರತದ ನಿಲುವಾಗಿತ್ತು. ಇದಾದ ಬಳಿಕ ರಾಜತಾಂತ್ರಿಕ ಸಂಬಂಧಗಳ ನಿಯಮ, ಅಂತಾರಾಷ್ಟ್ರೀಯ ಕೋರ್ಟ್ನ ತೀರ್ಪು ಹಾಗೂ ಪಾಕಿಸ್ತಾನದ ಕಾನೂನುಗಳಿಗೆ ಅನುಸಾರವಾಗಿ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಿದೆ.
ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನವು 2016 ಮಾರ್ಚ್ 3 ರಂದು ಭಾರತದ ಗೂಢಚಾರಿ ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಬಂಧಿಸಿತ್ತು. ಭಾರತದ ಗೂಢಚಾರಿಯಾಗಿ ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳನ್ನು ಆಯೋಜಿಸುತ್ತಿರುವ ಆರೋಪದ ಮೇಲೆ ಕುಲಭೂಷಣ್ ಜಾಧವ್ ಅವರನ್ನು ಖೈಬರ್ ಪಖ್ತುಂಕ್ವ ಪ್ರಾಂತ್ಯದಲ್ಲಿ ಬಂಧಿಸಿದ್ದಾಗಿ ಪಾಕ್ ಸರ್ಕಾರ ಹೇಳಿಕೊಂಡಿತ್ತು. ಆದರೆ, ವೈಯಕ್ತಿಕ ವ್ಯವಹಾರ ಸಂಬಂಧ ಇರಾನ್ ದೇಶಕ್ಕೆ ಹೋಗಿದ್ದಾಗ ಪಾಕಿಸ್ತಾನದವರು ಅಕ್ರಮವಾಗಿ ಕುಲಭೂಷಣ್ ಅವರನ್ನು ಬಂಧಿಸಿ ಕರೆದೊಯ್ದರು ಎಂಬುದು ಭಾರತದ ವಾದವಾಗಿದೆ.