ಪ್ರಧಾನಿ ಮೋದಿಯನ್ನು ಟೀಕಿಸುತ್ತಿದ್ದ ವೇಳೆ ಪಾಕ್ ಸಚಿವನಿಗೆ ಕರೆಂಟ್ ಶಾಕ್
Sat, Aug 31 2019 10:18:42 AM
ಇಸ್ಲಾಮಬಾದ್,ಆ 31 (Daijiworld News/RD): ಕಾಶ್ಮೀರಕ್ಕೆ ಬೆಂಬಲ ನೀಡುವ ಸಲುವಾಗಿ ಪಾಕ್ ಪ್ರಧಾನಿ, ’ಕಾಶ್ಮೀರ ಅವರ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಾಕ್ ರೈಲ್ವೆ ಸಚಿವ ಶೇಖ್ ರಶೀದ್, ಕೈಯಲ್ಲಿ ಮೈಕ್ ಹಿಡಿದು ಮೋದಿಯನ್ನು ಟೀಕಿಸುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡಿಸಿಕೊಂಡು ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರೇ ನಿಮ್ಮ ಉದ್ದೇಶಗಳ ಬಗ್ಗೆ ನಮಗೆ ಸ್ಪಷ್ಟವಾಗಿ ನಮಗೆ ತಿಳಿಯುತ್ತಿದೆ ಎಂದು ಹೇಳುವಾಗ ಕೈಯಲ್ಲಿ ಹಿಡಿದಿದ್ದ ಮೈಕ್ ಗೆ ವಿದ್ಯುತ್ ಪ್ರವಹಿಸಿ ಸ್ವಲ್ಪ ಕಾಲ ಗಲಿಬಿಲಿಗೊಂಡರು.
ಬಳಿಕ ಮಾತು ಆರಂಭಿಸಲು ಮುಂದಾದಾಗ ಅಲ್ಲಿ ನೆರೆದಿದ್ದ ಜನರು ಕರೆಂಟ್ ಬಂತು ಎಂದು ಹೇಳುವ ಮೂಲಕ ಅಪಹಾಸ್ಯ ಮಾಡಿದರು. ಇದರಿಂದ ಪೇಚಿಗೀಡಾದ ಸಚಿವ ಅಲ್ಲಿಂದ ಜಾರಿಕೊಳ್ಳಲು ಪ್ರಯತ್ನಿಸಿದರು. ಪಾಕ್ ಸಚಿವನ ಈ ವರ್ತನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ಹಿಂದೆ ಭಾರತ-ಪಾಕ್ ನಡುವೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಯುದ್ಧ ನಡೆಯಲಿದೆ ಎಂದು ಪಾಕ್ ರೈಲ್ವೆ ಸಚಿವ ಶೇಖ್ ರಶೀದ್ ಹೇಳಿದ್ದರು.