ಇಸ್ಲಾಮಾಬಾದ್,ಆ 29 (Daijiworld News/RD): ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಒಂದೊಂದು ಸಂಚು ರೂಪಿಸುತ್ತಿದ್ದು, ಇದೀಗ ಅಣ್ವಸ್ತ್ರ ಹೊತ್ತೊಯ್ಯ ಬಲ್ಲ ಘಜ್ನವಿ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ ಎಂದು ಪಾಕ್ ಸೇನೆಯ ಮೇಜರ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಪಾಕ್ ಸೇನೆಯ ಮೇಜರ್ ಆಸಿಫ್ ಗಫೂರ್ '' ಪಾಕಿಸ್ತಾನವು ಯಶಸ್ವಿಯಾಗಿ ಘಜ್ನವಿ ಕ್ಷಿಪಣಿ ಪರೀಕ್ಷೆ ನಡೆಸಿದೆ. ಈ ಕ್ಷಿಪಣಿಯು 290 ಕಿ.ಮೀ ದೂರದವರೆಗೂ ಚಲಿಸಬಲ್ಲದು'' ಎಂದು ಹೇಳಿ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಇದರ ಜೊತೆಗೆ ವಿಡಿಯೋ ಒಂದನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ. ಈಗಾಗಲೇ ಆರ್ಥಿಕ ದಿವಾಳಿತನದಿಂದ ಕಂಗೆಟ್ಟಿರುವ ಪಾಕ್ ಇದೀಗ ಕ್ಷಿಪಣಿ ಪರೀಕ್ಷೆ ನಡೆಸುವ ಮೂಲಕ ಭಾರತದ ಜೊತೆ ಸೆಣೆಸಾಡಲು ಮುಂದಾಗಿದೆ.
ಕರಾಚಿಯ ಸೋನ್ಮೈನಿ ಬಳಿ ಪಾಕ್ ಈ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿದ್ದು. ಇದೇ ಕಾರಣಕ್ಕೆ ಆಗಸ್ಟ್ 28ರಿಂದ ಆಗಸ್ಟ್ 31ರವರೆಗೆ ಕರಾಚಿ ಮೂಲಕ ಸಂಚರಿಸುವ ಭಾರತೀಯ ವಿಮಾನಗಳ ಮೂರು ವಾಯು ಮಾರ್ಗವನ್ನು ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಪಾಕ್ ನ ಈ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಈ ಎಲ್ಲಾ ಅನುಮಾನಗಳಿಗೆ ಸ್ಷಷ್ಟತೆ ನೀಡುವಂತೆ ಬುಧವಾರ ರಾತ್ರಿ ಪಾಕ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ ಎಂದು ಹೇಳಿದೆ.
ಈಗಾಗಲೇ ಪಾಕ್ ರೈಲ್ವೆ ಸಚಿವ ಶೇಖ್ ರಶೀದ್ಪಾ ಯುದ್ದದ ಬಗ್ಗೆ ಪ್ರಸ್ತಾಪಿಸಿದ್ದು, ಪಾಕ್ ಮತ್ತು ಭಾರತವು 2019 ರ ಅಂತ್ಯದೊಳಗೆ ಯುದ್ಧ ಮಾಡಲಿದೆ ಎಂದು ಹೇಳಿದ್ದರು. ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನ ರದ್ದಾದ ಬಳಿಕ ಕೆಂಡಾಮಂಡಲಗೊಂಡಿರುವ ಪಾಕಿಸ್ತಾನ, ಭಾರತದ ಈ ನಿರ್ಣಯವನ್ನು ಪ್ರಶ್ನಿಸಿ ವಿಶ್ವಸಂಸ್ಥೆಗೆ ಇದರ ವಿರುದ್ಧ ಮನವಿ ಸಲ್ಲಿಸಿತು. ಹೀಗೆ ಜಾಗತೀಕ ಮಟ್ಟದಲ್ಲಿ ಈ ವಿಚಾರದ ಬಗ್ಗೆ ಮುಖಭಂಗಕ್ಕೀಡಾದ ಪಾಕ್, ಇದೀಗ ಭಾರತದ ವಿರುದ್ಧ ನೇರಾ ಹಣಾಹಣಿ ಸಾಧಿಸಲು ಮುಂದಾಗಿದ್ದು, ಕ್ಷಿಪಣಿ ಪರೀಕ್ಷೆಯನ್ನು ಯಶ್ಸಸ್ವಿಯಾಗಿ ಮಾಡುವ ಮೂಲಕ ಭಾರತದ ವಿರುದ್ದ ಹಗೆ ಸಾದಿಸಲು ಮುಂದಾಗಿದೆ.