ಅಬುದಾಬಿ, ಆ.24(Daijiworld News/SS): ಇಂದು ಮುಂಜಾನೆ ಯುಎಇ ರಾಜಧಾನಿ ಅಬುದಾಬಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಭಾರತ ಮತ್ತು ಅಬುದಾಬಿ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುವ ಗುರಿ ಹೊಂದಿದ್ದಾರೆ.
ಪ್ಯಾರಿಸ್'ನಲ್ಲಿ ನಡೆದ ಜಿ7 ಶೃಂಗಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಬಂದಿಳಿದಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಯುಎಇ ಪ್ರವಾಸದ ವೇಳೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ, ಅಂತಾರಾಷ್ಟ್ರೀಯ ಸಂಬಂಧದ ಕುರಿತು ಚರ್ಚೆ ನಡೆಸಲಿದ್ದಾರೆ. ಜೊತೆಗೆ ಯುಎಇ ದೊರೆ ಶೇಖ್ ಮಹಮದ್ ಬಿನ್ ಜಾಯೆದ್ ಅನ್ ನಹ್ಯಾನ್'ರೊಂದಿಗೆ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ ವಿದೇಶಗಳಲ್ಲೂ ಕಾರ್ಯ ನಿರ್ವಹಿಸುವ ಭಾರತದ ರುಪೇ ಕಾರ್ಡ್ ಸೇವೆಯನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಇದೇ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇ ಸರ್ಕಾರ ನೀಡುವ ಅತ್ಯುನ್ನತ ಗೌರವ 'ಆರ್ಡರ್ ಆಫ್ ಜಾಯೆದ್' ನೀಡಿ ಗೌರವಿಸಲಾಗುತ್ತದೆ.