ವಾಷಿಂಗ್ಟನ್, ಆ.20(Daijiworld News/SS): ಜಮ್ಮು-ಕಾಶ್ಮೀರದಲ್ಲಿ ಉದ್ವಿಗ್ನ ಸ್ಥಿತಿಯನ್ನು ತಗ್ಗಿಸಲು ಭಾರತದೊಂದಿಗೆ ಮೃದು ಧೋರಣೆ ನಡೆಸುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್'ಗೆ ಕಿವಿಮಾತು ಹೇಳಿದ್ದಾರೆ.
ಈ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಅವರು, ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿಯನ್ನು ನಿವಾರಿಸಲು ಭಾರತದೊಂದಿಗೆ ಮೃದು ನಿಲುವು ತಳೆಯುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಯೂ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೋದಿಯವರು ಪಾಕಿಸ್ತಾನದ ನಾಯಕರು ಭಾರತ ವಿರೋಧಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದು ಅದು ತೀವ್ರವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಪರಿಸ್ಥಿತಿಯ ಉಲ್ಬಣವನ್ನು ತಪ್ಪಿಸುವ ಅಗತ್ಯವನ್ನು ಟ್ರಂಪ್ ದೂರವಾಣಿ ಸಂಭಾಷಣೆ ವೇಳೆ ಪುನರುಚ್ಚರಿಸಿದ್ದಾರೆ. ಅಮೆರಿಕಾ-ಪಾಕಿಸ್ತಾನ ಆರ್ಥಿಕ ಮತ್ತು ಉದ್ಯಮ ಸಹಕಾರವನ್ನು ಬಲಪಡಿಸಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.