ಕಾಬೂಲ್,ಆ 18 (Daijiworld News/RD): ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಉಗ್ರರ ದಾಳಿ ಮುಂದುವರೆದಿದ್ದು, ಮದುವೆ ಸಮಾರಂಭದ ಹಾಲ್ ನಲ್ಲಿ ಆತ್ಮಾಹುತಿ ದಾಳಿ ನಡೆಸಿ 63 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಕಾಬೂಲ್ ನ ಶೇಹರ್ ಎ ದುಬೈ ಎಂಬ ಎರಡು ಅಂತಸ್ತಿನ ಕಟ್ಟಡದಲ್ಲಿ ಮದುವೆ ಸಮಾರಂಭ ಹಮ್ಮಿಕೊಂಡಿದ್ದು, ಸಾವಿರಕ್ಕೂ ಅಧಿಕ ಮಂದಿ ಈ ಸಮಾರಂಭದಲ್ಲಿ ಭಾಗಿಯಾಗಿದ್ದು, ಭೀಕರ ಬಾಂಬ್ ಸ್ಫೋಟಗೊಂಡು ಈ ದುರಂತ ನಡೆದಿದೆ. ಈ ದಾಳಿಯಲ್ಲಿ 63 ಮಂದಿ ಸಾವನ್ನಪ್ಪಿದ್ದು, ಸುಮಾರು 182 ಕ್ಕೂ ಅಧಿಕ ಜನರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಈ ಘಟನೆಯಲ್ಲಿ ಗಾಯಗೊಂಡವರು ಹೆಚ್ಚಿನವರು ಮಹಿಳೆಯರು ಹಾಗು ಮಕ್ಕಳು ಆಗಿದ್ದು, ಈ ದಾಳಿಯು ಕಾಬೂಲ್ನಲ್ಲಿ ಈ ವರ್ಷ ನಡೆದ ದೊಡ್ಡ ದಾಳಿ ಎನ್ನಲಾಗುತ್ತಿದೆ. ತಾಲಿಬಾನ್ ಮತ್ತು ಇಸ್ಲಾಮಿಕ್ ರಾಜ್ಯ ಎರಡೂ ಕಾಬೂಲ್ನಲ್ಲಿ ಹೆಚ್ಚಾಗಿ ದಾಳಿ ನಡೆಸುತ್ತಿದ್ದು, ಆದರೆ ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಾಲಿಬಾನಿ ಉಗ್ರ ಸಂಘಟನೆ ಸ್ಪಷ್ಟಪಡಿಸಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ನೇಮಕಗೊಂಡಿದ್ದು, ಈ ಸೈನ್ಯವನ್ನು ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿ ಅಮೆರಿಕ ಹಾಗೂ ತಾಲಿಬಾನ್ ಒಪ್ಪಂದ ಒಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಈ ನಡುವೆ ಈ ದುರಂತ ಸಂಭವಿಸಿದೆ. ಈ ಬಗ್ಗೆ ಮಾತನಾಡಿರುವ ಅಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಎಂದು ತಿಳಿಸಿದ್ದಾರೆ.