ಭೂತಾನ್,ಆ 18 (Daijiworld News/RD): ಪ್ರಧಾನಿ ನರೇಂದ್ರ ಮೋದಿ ಭೂತಾನ್ ದೇಶಕ್ಕೆ ಎರಡು ದಿನ ಪ್ರವಾಸ ಹಮ್ಮಿಕೊಂಡಿದ್ದು. ಭೂತಾನ್ ಪ್ರಧಾನಿ ಲೋಟೇ ಶೆರಿಂಗ್ ಮತ್ತು ಮೋದಿ ಅವರು ಎರಡೂ ದೇಶಗಳ ದ್ವಿಪಕ್ಷೀಯ ಪಾಲುದಾರಿಕೆಗೆ ಒತ್ತು ನೀಡುವಂತಹ ಹಲವಾರು ವಿಚಾರಗಳ ಬಗ್ಗೆ ಮಾತುಕತೆ ನಡೆಸಿ 10 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಭೂತಾನ್ ದೇಶಕ್ಕೆ ಎರಡನೇ ಬಾರಿ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾರೋ ವಿಮಾನನಿಲ್ದಾಣದಲ್ಲಿ ಭೂತಾನ್ ಪ್ರಧಾನಿ ಲೋಟೇ ಶೆರಿಂಗ್ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಭಾರತ ಮತ್ತು ಭೂತಾನ್ ಮಧ್ಯೆ 10 ಒಪ್ಪಂದಗಳಿಗೆ (ಮೆಮೋರಾಂಡಮ್ ಆಫ್ ಅಮಡರ್ಸ್ಟಾಂಡಿಂಗ್) ಪತ್ರಗಳಿಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಭೂತಾನ್ನಲ್ಲಿ ಭಾರತದ ರೂಪೇ ಕಾರ್ಡ್ನ ಉದ್ಘಾಟನೆ ಮಾಡಿದರು.
ಸ್ಪೇಸ್ ರಿಸರ್ಚ್, ವಿಮಾನಯಾನ, ಐಟಿ, ವಿದ್ಯುತ್ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸೇರಿದ 10 ಒಡಂಬಡಿಕೆಗಳಿಗೆ ಎರಡೂ ದೇಶಗಳ ಪ್ರಧಾನಿ ಸಹಿ ಹಾಕಿದರು. ದಕ್ಷಿಣ ಏಷ್ಯಾ ರಾಷ್ಟ್ರಗಳ ನೆರವಿಗೆಂದೇ ಇಸ್ರೋ ಉಡಾವಣೆ ಮಾಡಿದ್ದ ವಿಶೇಷ ಉಪಗ್ರಹದ ಸೇವೆಯನ್ನು ಭೂತಾನ್ಗೆ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಗ್ರೌಂಡ್ ಅರ್ಥ್ ಸ್ಟೇಷನ್, ಸ್ಯಾಟ್ಕಾಮ್ ನೆಟ್ವರ್ಕ್ ಅನ್ನು ಲೋಕಾರ್ಪಣೆಗೊಳಿಸಲಾಯಿತು. ಸ್ಪೇಸ್ ತಂತ್ರಜ್ಞಾನದ ಸಹಾಯದಿಂದ ಭೂತಾನ್ನ ಅಭಿವೃದ್ಧಿ ಸಾಧ್ಯವಾಗುತ್ತದೆ. ಭೂತಾನ್ನಲ್ಲಿ ಸಂವಹನ, ಪ್ರಸರಣ ಮತ್ತು ವಿಪತ್ತು ನಿರ್ವಹಣೆಯಲ್ಲಿ ಭಾರತ ನೆರವಾಗುತ್ತದೆ ಎಂದು ನರೇಂದ್ರ ಮೋದಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಭೂತಾನ್ನ ವಿದ್ಯುತ್ ಅನ್ನು ಅತೀ ಹೆಚ್ಚು ಖರೀದಿಸುವ ದೇಶ ಭಾರತವಾಗಿದ್ದು, ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಮಾಂಗಡೇಚು ಜಲವಿದ್ಯುತ್ ಘಟಕವನ್ನು ಉದ್ಘಾಟನೆ ಮಾಡಿದರು. ಎರಡು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ, ಎರಡನೇ ದಿನವಾದ ನಾಳೆ ಅವರು ಭೂತಾನ್ನ ಪ್ರತಿಷ್ಠಿತ ರಾಯಲ್ ಯೂನಿವರ್ಸಿಟಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದು, ಬಳಿಕ ಸಂಜೆ ಮೋದಿ ಅವರು ಭಾರತಕ್ಕೆ ಹಿಂತಿರುಗಲಿದ್ದಾರೆ.