ಇಸ್ಲಾಮಾಬಾದ್, ಆ.08(Daijiworld News/SS): ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬೆನ್ನಲ್ಲೇ, ಪಾಕಿಸ್ತಾನವು ಮತ್ತೆ ತನ್ನ ವಿಮಾನಯಾನ ಪ್ರದೇಶದಲ್ಲಿ ಭಾರತದ ವಿಮಾನ ಹಾರಾಟವನ್ನು ಭಾಗಶಃ ಸ್ಥಗಿತಗೊಳಿಸಿದೆ.
ಬಾಲಾಕೋಟ್ ಸರ್ಜಿಕಲ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಮಾನಯಾನ ಪ್ರದೇಶವನ್ನು ಪರಸ್ಪರ ರದ್ದುಗೊಳಿಸಲಾಗಿತ್ತು. ಇದೀಗ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಹಿನ್ನಲೆ, ಮತ್ತೆ ವಾಯುಯಾನ ಸ್ಥಗಿತಗೊಳಿಸಲು ಪಾಕ್ ಆದೇಶಿಸಿದೆ. ಭಾರತದೊಂದಿಗೆ ದ್ವಿಪಕ್ಷೀಯ ವಾಣಿಜ್ಯ ಸಂಬಂಧ ಭಾಗಶಃ ರದ್ದುಪಡಿಸಲು ಇಮ್ರಾನ್ ಖಾನ್ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆ ವಿಮಾನಯಾನ ಪ್ರದೇಶದಲ್ಲಿ ಭಾರತದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದ್ದರಿಂದ ಪಾಕಿಸ್ತಾನಕ್ಕೆ 820ಕ್ಕೂ ಅಧಿಕ ಕೋಟಿ ರೂ ನಷ್ಟವಾಗಿತ್ತು. ಆ ಬಳಿಕ ಭಾರತೀಯ ವಿಮಾನಗಳಿಗೂ ಪಾಕಿಸ್ತಾನ ವಾಯುಯಾನ ಪ್ರದೇಶದಲ್ಲಿ ಹಾರಾಡಲು ಅನುಮತಿ ನೀಡಿತ್ತು. ಆದರೆ ಈಗ ಮತ್ತೆ ಪಾಕಿಸ್ತಾನ ಅದೇ ನಿರ್ಧಾರ ತೆಗೆದುಕೊಂಡಿದೆ.
ಪಾಕಿಸ್ತಾನದ ಕ್ರಮಕ್ಕೆ ಪ್ರತಿಯಾಗಿ ಭಾರತವು ಶೀಘ್ರದಲ್ಲೇ ಈ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎನ್ನಲಾಗುತ್ತಿದೆ. ಇದರಿಂದ ಗಡಿ ದೇಶಗಳ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸುವ ಸಾಧ್ಯತೆ ಇದೆ.