ಇಸ್ಲಾಮಾಬಾದ್ , ಜು 02 (Daijiworld News/MSP): ಹಣದುಬ್ಬರಕ್ಕೆ ಸಿಲುಕಿ ಪಾಕಿಸ್ಥಾನ ಆರ್ಥಿಕವಾಗಿ ದೀವಾಳಿ ಅಂಚು ತಲುಪಿದ್ದು, ಇದೀಗ ದಿನನಿತ್ಯ ಬಳಸುವ ಆಹಾರ ಸಾಮಗ್ರಿಗಳೂ ಕೂಡಾ ಜನ ಸಾಮಾನ್ಯರ ಕೈಗೆಟುಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದಿನಸಿ ಹಾಗೂ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಪಾಕ್ ನ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಪಾಕ್ ನಲ್ಲಿ ನಾನ್ ಮತ್ತು ರೋಟಿ ಬೆಲೆಯನ್ನು ತಕ್ಷಣ ಇಳಿಸುವಂತೆ ಪ್ರಾಂತೀಯ ಸರ್ಕಾರಗಳಿಗೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಆದೇಶಿಸಿದ್ದಾರೆ.
ಇದರೊಂದಿಗೆ ಜನಸಾಮಾನ್ಯರ ಅಗತ್ಯ ಆಹಾರ ವಸ್ತುಗಳ ದರವನ್ನು ಜೂನ್ ತಿಂಗಳಲ್ಲಿದ್ದ ದರಕ್ಕೆ ಇಳಿಸಲು ಸೂಚನೆ ನೀಡಿದ್ದಾರೆ. ಪಾಕಿಸ್ತಾನ ಕರೆನ್ಸಿಯಲ್ಲಿ ಪ್ರಸ್ತುತ ಒಂದು ನಾನ್ 12ರಿಂದ 15 ರೂಪಾಯಿ ಇದ್ದು, ಒಂದು ರೋಟಿಯ ಬೆಲೆ 10ರಿಂದ 12 ರೂಪಾಯಿ ಇದೆ. ಜೂನ್ ತಿಂಗಳಲ್ಲಿ ಇದರ ಬೆಲೆ 8ರಿಂದ 10 ಹಾಗೂ 7ರಿಂದ 8 ರೂಪಾಯಿ ಇತ್ತು. ಒಂದೇ ಸಮನೆ ಸಿಲಿಂಡರ್ ಸುಂಕ ಮತ್ತು ಗೋಧಿ ಹಿಟ್ಟಿನ ಬೆಲೆ ಏರಿಕೆ ಕಂಡ ನಂತರ ನಾನ್ ಮತ್ತು ರೋಟಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಇದರೊಂದಿಗೆ ಪೆಟ್ರೋಲ್, ಡಿಸೇಲ್ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿಂದೆ ಪ್ರಧಾನಿ ಇಮ್ರಾನ್ ಖಾನ್ ಪಾಕ್ ದೀವಾಳಿಯಾಗುವುದನ್ನು ತಪ್ಪಿಸಲು ಸಿರಿವಂತರಿಗೆ, ಬೇನಾಮಿ ಆಸ್ತಿಪಾಸ್ತಿ ಹೊಂದಿದವರಿಗೆ, ತಮ್ಮ ಸಂಪತ್ತನ್ನು ಘೋಷಿಕೊಳ್ಳುವಂತೆ ಕರೆ ನೀಡಿದ್ದರು. ನಮ್ಮದು ಮಹೋನ್ನತ ದೇಶವಾಗಬೇಕಾದರೆ ನಿಮ್ಮೆಲ್ಲರ ನೈಜ ಆಸ್ತಿಪಾಸ್ತಿ ಘೋಷಿಸಿ ಅಲ್ಲದೇ ತೆರಿಗೆ ಸಂಗ್ರಹ ಹೆಚ್ಚಿಸುವ ಮೂಲಕ ದೇಶವನ್ನು ಏಳಿಗೆಯತ್ತ ಕೊಂಡೊಯ್ಯಬೇಕಿದೆ ಎಂದಿದ್ದರು. ಅಲ್ಲದೆ ಬಜೆಟ್ ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಮೀಸಲಿರಿಸುವ ಹಣವನ್ನು ಕಡಿತ ಮಾಡಲು ನಿರ್ಧರಿಸಿದೆ.