ವಾಷಿಂಗ್ಟನ್, ಆ 1 (Daijiworld News/MSP): ಅಲ್ ಖೈದಾ ಉಗ್ರ ಸಂಘಟನೆಯ ಸ್ಥಾಪಕ ಹಾಗೂ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನ ಮಗ ಹಂಝಾ ಬಿನ್ ಲಾಡೆನ್ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಆದರೆ ಆತ ಹಂಝಾ ಬಿನ್ ಲಾಡೆನ್ನ ಸಾವು ಎಲ್ಲಿ ಮತ್ತು ಹೇಗೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿಲ್ಲ.
ಹಂಝಾ ಬಿನ್ ಲಾಡೆನ್ ಕುರಿತು ಮಾಹಿತಿ ನೀಡಿದವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ನಿಡುವುದಾಗಿ ಅಮೇರಿಕಾ ಸರ್ಕಾರ ಕಳೆದ ಪೆಬ್ರವರಿಯಲ್ಲಿ ಘೋಷಿಸಿತ್ತು.
ಹಂಝಾ ಸಾವಿನ ಕುರಿತು ವರದಿ ಮಾಡಿರುವ ಎನ್ ಬಿಸಿ ನ್ಯೂಸ್ ಆಫ್ ಅಮೇರಿಕಾ ಮಾಧ್ಯಮದ ಪ್ರಕಾರ, ಅಮೇರಿಕಾದ ಮೂವರು ಅಧಿಕಾರಿಗಳು ಲಾಡೆನ್ ಪುತ್ರ ಹಂಝಾ ಸಾವನ್ನಪ್ಪಿರುವುದನ್ನು ಖಚಿತಪಡಿಸಿರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅಮೇರಿಕಾ ಅಧ್ಯಕ್ಷ ಟ್ರಂಪ್ ನಿರಾಕರಿಸಿದ್ದಾರೆ. ಮಾತ್ರವಲ್ಲದೆ ನಾನು ಈ ಬಗ್ಗೆ ಯಾವುದೇ ಹೇಳಿಕೆ ನೀಡಬೇಕಾಗಿಲ್ಲ ಎಂದು ಉತ್ತರಿಸಿದ್ದಾರೆ ಎಂದು ಎನ್ ಬಿಸಿ ನ್ಯೂಸ್ ತಿಳಿಸಿದೆ.
ಹಂಝಾ ಬಿನ್ ಲಾಡೆನ್ ಕೊನೆಯ ಬಾರಿಗೆ ಸಾರ್ವಜನಿಕವಾಗಿ 2018 ರಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ನಂಬಲಾಗಿದೆ. ಇತನ ವಯಸ್ಸು 30 ಎಂದು ಅಂದಾಜಿಸಲಾಗಿದ್ದು, ತಂದೆಯನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರ ತೀರಿಸುವಂತೆ ಹಂಝಾ ಜಿಹಾದಿಗಳಿಗೆ ಕರೆ ನೀಡಿದ್ದ. ಈತ ಅಲ್ ಖೈದಾದ ಹಿರಿಯ ನಾಯಕನ ಪುತ್ರಿಯನ್ನು ಇರಾನ್ ನಲ್ಲಿ ವಿವಾಹವಾಗಿದ್ದಾನೆ ಎಂದು ನಂಬಲಾಗಿದೆ. ಈ ವಿವಾಹದ ವೀಡಿಯೋಗಳು ಅಮೇರಿಕಾ ಗುಪ್ತಚರ ಪಡೆ ಪತ್ತೆ ಹಚ್ಚಿತ್ತು.