ಹೇಗ್, ಜು17(Daijiworld News/SS): ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ತೀರ್ಪು ನೀಡಲಿದೆ.
ಪಾಕಿಸ್ತಾನದಲ್ಲಿರುವ ಭಾರತದ ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪು ಇಂದು ಪ್ರಕಟಗೊಳ್ಳುವ ನಿರೀಕ್ಷೆ ಇದೆ. ವಾದ ಪ್ರತಿವಾದ ಆಲಿಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಶೀತಲ ಸಮರಕ್ಕೆ ಕುಲಭೂಷಣ್ ಜಾಧವ್ ಪ್ರಕರಣ ನಾಂದಿ ಹಾಡಿತ್ತು.
ಮಾಜಿ ನೌಕಾ ಅಧಿಕಾರಿ ಕುಲಭೂಷನ್ ಜಾಧವ್ಗೆ ಗೂಢಚಾರಿ ಹಾಗೂ ಉಗ್ರವಾದ ಆರೋಪದ ಮೇಲೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಭಾರತ ಮೊರೆ ಹೋಗಿತ್ತು. ಪ್ರಕರಣದ ವಿಚಾರಣೆ ಐಸಿಜೆಯ ಹೇಗ್ ಕೇಂದ್ರ ಕಚೇರಿಯಲ್ಲಿ ಫೆಬ್ರವರಿ 18ರಂದು ಆರಂಭಗೊಂಡಿತ್ತು.
2016ರಲ್ಲಿ ಪಾಕಿಸ್ತಾನ ಸೇನೆ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿತ್ತು. ದೇಶದ್ರೋಹ ಹಾಗೂ ಭಯೋತ್ಪಾದನಾ ಚಟುವಟಿಕೆಯಲ್ಲಿ ಜಾಧವ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ 2016ರ ಏಪ್ರಿಲ್ನಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ಜಾಧವ್ಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಭಾರತ ಸರ್ಕಾರವು ದಿ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮರಣ ದಂಡನೆ ಜಾರಿಗೆ ತಡೆಯಾಜ್ಞೆ ನೀಡಿತ್ತು.