ನ್ಯೂಜೆರ್ಸಿ, ಜು06(Daijiworld News/SS): ಕರ್ನಾಟಕದಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಕುರಿತು ಅನೇಕ ಕ್ರಮ ಕೈಗೊಂಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನ್ಯೂಜೆರ್ಸಿಯಲ್ಲಿ ಒಕ್ಕಲಿಗರ ಪರಿಷತ್ ಅಮೆರಿಕದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಕುರಿತು ಅನೇಕ ಕ್ರಮ ಕೈಗೊಂಡಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮೀಡಿಯಂನಲ್ಲಿ ಶಿಕ್ಷಣ ಒದಗಿಸುವ ನಿರ್ಧಾರ ಮಾಡಿದ್ದೇವೆ. ಈಗಾಗಲೇ ಒಂದು ಸಾವಿರ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂನಲ್ಲಿ ಶಿಕ್ಷಣ ಪ್ರಾರಂಭಿಸಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಈಗಾಗಲೇ 276 ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮತ್ತು ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು 1,200 ಕೋಟಿ ರೂ. ಅನುದಾನ ನೀಡಿದ್ದೇವೆ. ಸರ್ಕಾರದ ದೂರದೃಷ್ಟಿಯ ಈ ಕ್ರಮಗಳು ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ಹೇಳಿದರು.
ಕನ್ನಡನಾಡು ಮತ್ತು ಅಮೆರಿಕ ನಡುವೆ ಒಕ್ಕಲಿಗರ ಪರಿಷತ್ ಬೆಸೆದ ನಂಟು ಕರ್ನಾಟಕದ ಧೀಮಂತ ಸಂಸ್ಕೃತಿ ಮತ್ತು ಅಮೆರಿಕದ ಆಧುನಿಕ ಸಂಸ್ಕೃತಿಗಳ ನಡುವೆ ನಿರ್ವಿುಸಿದ ಸೇತುವೆ. ಕನ್ನಡದ ಮಣ್ಣಲ್ಲಿ ಹುಟ್ಟಿ, ಬದುಕನ್ನರಸುತ್ತಾ ಬಹುದೂರ ಬಂದಿರುವ ನೀವು ನಿಮ್ಮ ಬೇರುಗಳನ್ನು ಗಟ್ಟಿಗೊಳಿಸುತ್ತಿರುವುದು ಶ್ಲಾಘನೀಯ. ನಿಮ್ಮ ಪರಿಣತಿ, ಅಪಾರ ಅನುಭವ, ಅಸೀಮ ಬುದ್ಧಿವಂತಿಕೆಯ ಪ್ರಯೋಜನ ತಾಯ್ನಾಡಿಗೂ ಹರಿದು ಬರುವಂತಾಗಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅನೇಕ ಅಪಸ್ವರಗಳ ನಡುವೆಯೂ ಗಟ್ಟಿಯಾದ ಸೈದ್ಧಾಂತಿಕ ತಳಹದಿಯ ಮೇಲೆ ಜನಹಿತ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿಟ್ಟಿದೆ. ಕೃಷಿಕರ ನೆರವಿಗೆ ಧಾವಿಸಲು ಸಾಲಮನ್ನಾ ಮಾಡಿದ್ದೇವೆ ಎಂದು ಹೇಳಿದರು.