ಕುವೈತ್, ಜು 04 (Daijiworld News/SM): ಕುವೈತ್ ನಲ್ಲಿ ಗೃಹ ಬಂಧನದಲ್ಲಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಭಾರತೀಯ ಮೂಲದ ಕೆಲವು ಸಮಾಜ ಸೇವಾ ಮನೋಭಾವದವರ ಸಹಾಯದಿಂದ ಮಹಿಳೆಯನ್ನು ರಕ್ಷಿಸಲಾಗಿದೆ. ಕುವೈತ್ ನಲ್ಲಿ ಕೆಲಸಕ್ಕೆ ಸೇರಿದ್ದ ಮಂಗಳೂರು ಮೂಲಕ ರೇಶ್ಮಾ ಸುವರ್ಣ ಎಂಬ ಮಹಿಳೆಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ಕೆಲಸ ನೀಡಿದ್ದ ಯಜಮಾನನೇ ಆಕೆಯನ್ನು ಗೃಹ ಬಂಧನದಲ್ಲಿರಿಸಿದ್ದ.
ಈ ಬಗ್ಗೆ ಮಾಹಿತಿ ತಿಳಿದಂತಹ ಸಮಾಜ ಸೇವಕಿಯೊಬ್ಬರು ಮಹಿಳೆಯನ್ನು ಬಿಡುಗದೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಡುಗಡೆಗೊಂಡ ಬಳಿಕ ಮಹಿಳೆಯನ್ನು ಜುಲೈ ೪ರ ಗುರುವಾರ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರಿಸಲಾಗಿದೆ.
ಆರು ತಿಂಗಳ ಹಿಂದೆ ರೇಶ್ಮಾ ಸುವರ್ಣ ಎಂಬವರು ಮಂಗಳೂರು ಮೂಲದ ಏಜೆನ್ಸಿಯೊಂದರ ಜಬ್ಬಾರ್ ಹಾಗೂ ಅನ್ವರ್ ಎಂಬವರ ಮೂಲಕ ಉದ್ಯೋಗಕ್ಕೆಂದು ಕುವೈತ್ ಗೆ ತೆರಳಿದ್ದರು. ಬಳಿಕ ಅವರನ್ನು ಕುವೈತ್ ನ ಒಂದು ಕುಟುಂಬಕ್ಕೆ ಮನೆ ಕೆಲಸಕ್ಕೆಂದು ಹಸ್ತಾಂತರಿಸಿದ್ದರು. ಆ ಕುಟುಂಬದ ಕೆಲಸಕ್ಕೆಂದು ಸೇರಿದ್ದ ರೇಶ್ಮಾ ಅವರ ಜೀವನ ಕತ್ತಲ ಕೂಪವಾಯಿತು. ಮುಂಜಾನೆಯಿಂದ ಮಧ್ಯರಾತ್ರಿ ತನಕ ರೇಶ್ಮಾರಿಗೆ ಗುಲಾಮರಂತೆ ದುಡಿಸಲಾಗುತ್ತಿತ್ತು. ಹಾಗೂ ಕೆಲಸ ಮುಗಿದ ಬಳಿಕ ಆವರನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಲಾಗುತ್ತಿತ್ತು.
ಅಲ್ಲದೆ ಅವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರದಂತೆ ಮಾಡಿದ್ದರು. ಹಾಗೂ ಮನೆಯಿಂದ ಹೊರಗೆ ತೆರಳದಂತೆ ಬಂಧನದಲ್ಲಿಟ್ಟಿದ್ದರು. ಈ ನಡುವೆ ರೇಶ್ಮಾ ಕುಟುಂಬಸ್ಥರು ಅವರನ್ನು ಸಂಪರ್ಕಿಸಲು ಯತ್ನಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಏಜೆನ್ಸಿಯ ಜಬ್ಬಾರ್ ಹಾಗೂ ಅನ್ಸರ್ ಮೂಲಕ ಸಂಪರ್ಕಕೆ ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಕುವೈತ್ ನಲ್ಲಿ ನೆಲೆಸಿದ್ದ ಮಂಗಳೂರು ಮೂಲದವರ ಮೂಲಕ ರೇಶ್ಮಾರನ್ನು ಹುಡುಕುವಂತೆ ಕುಟುಂಬಸ್ಥರು ವಿನಂತಿಸಿದ್ದರು.
ರಾಯಭಾರಿ ಕಚೇರಿಯ ಸಲಹೆಯಂತೆ ಮಾಧವ ನಾಯ್ದ್, ದಿನೇಶ್ ಸುವರ್ಣ, ರಾಜ್ ಭಂಡಾರಿ, ಮೋಹನ್ ದಾಸ್ ಕಾಮತ್ ನೇತೃತ್ವದ ತಂಡ ಮಹಿಳೆಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ.