ಲಾಹೋರ್ , ಜು 04 (Daijiworld News/MSP): ಅಂತರಾಷ್ಟ್ರೀಯ ಮಟ್ಟದ ಒತ್ತಡಕ್ಕೆ ಕೊನೆಗೂ ಪಾಕಿಸ್ತಾನ ಸ್ವಲ್ಪ ಮಟ್ಟಿಗೆ ಮಣಿದಂತಿದೆ. ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ವಿರುದ್ದ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ದಳ ಹಲವು ಪ್ರಕರಣಗಳನ್ನ ದಾಖಲಿಸಿದೆ.
2008ರ ಮುಂಬೈ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು. ಈ ದಾಳಿಯ ಹಿಂದೆ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಭಾರತ ಹಾಗೂ ಅಮೇರಿಕಾ ಅಪಾದನೆ ಮಾಡಿತ್ತು. ಹಫೀಜ್ ಸಯೀದ್ ಈ ಸಂಘಟನೆಗೆ ಆರ್ಥಿಕ ಸಹಾಯ ಒದಗಿಸಲು ಐದು ಟ್ರಸ್ಟ್ಗಳನ್ನು ಬಳಕೆ ಮಾಡಿಕೊಂಡಿದ್ದ ಎಂಬ ಆರೋಪವಿದೆ. ಈ ಹಿನ್ನಲೆಯಲ್ಲಿ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿರುವುದು ಸೇರಿದಂತೆ, ಹಲವು ಪ್ರಕರಣಗಳು ಹಫೀಜ್ ಹಾಗೂ ಅವನ 12 ಸಹಚರರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಭಯೋತ್ಪಾದನಾ ವಿರೋಧಿ ಕಾಯ್ದೆ ಅಡಿಯಲ್ಲಿ ಪಾಕ್ ಉಗ್ರ ನಿಗ್ರಹ ದಳ ಲಾಹೋರ್, ಗುಜ್ರಾನ್ವಾಲಾ ಮತ್ತು ಮುಲ್ತಾನ್ನಲ್ಲಿನಲ್ಲಿದ್ದ 5 ಸಂಸ್ಥೆಗಳ ಮೇಲೂ ಪ್ರಕರಣ ದಾಖಲಿಸಿಕೊಂಡಿದೆ.
ಆರೋಪಿತ ವ್ಯಕ್ತಿಗಳು ಹಾಗೂ ಸಂಸ್ಥೆಗೆ ಸೇರಿದ ಆಸ್ತಿ - ಪಾಸ್ತಿ ಜಪ್ತಿ ಮಾಡಿ, ಸರ್ಕಾರದ ಸುಪರ್ದಿಗೆ ನೀಡಿದ್ದೇವೆ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಪಾಕ್ ಉಗ್ರ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.