ಸಿಂಗಾಪುರ, ಜು03(Daijiworld News/SS): ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ ಸೋದರಿ ಹೊಂದಿರುವ ಉದ್ದಿಮೆಗಳ ಖಾತೆಯನ್ನು ನಿಷ್ಕ್ರಿಯಗೊಳಿಸುವಂತೆ ಸಿಂಗಾಪುರದ ಹೈಕೋರ್ಟ್ ಆದೇಶ ನೀಡಿದೆ.
ನೀರವ್ ಮೋದಿ ಸೋದರಿ ಪೂರ್ವಿ ಮೋದಿ ಮತ್ತು ಅವರ ಪತಿ ಮಯಾಂಕ್ ಮೆಹ್ತಾ ಪೆವಿಲಿಯನ್ ಪಾಯಿಂಟ್ ಕಾರ್ಪೆರೇಷನ್ ಮತ್ತು ಬ್ರಿಟಿಷ್ ವಿರ್ಜಿನ್ ಐಲೆಂಡ್ ಕಂಪನಿಗಳ ಒಡೆತನ ಹೊಂದಿದ್ದಾರೆ. ಈ ಕಂಪನಿಗಳ ಬ್ಯಾಂಕ್ ಖಾತೆಯಲ್ಲಿ 44.41 ಕೋಟಿ ಹಣವಿದ್ದು, ಇದನ್ನು ನಿಷ್ಕ್ರಿಯಗೊಳಿಸುವಂತೆ ಭಾರತದ ಜಾರಿ ನಿರ್ದೇಶನಾಲಯ (ಇ.ಡಿ.)ಕೋರಿತ್ತು. ಈ ಹಣವನ್ನು ನೀರವ್ ಮೋದಿ ಅಕ್ರಮವಾಗಿ ವರ್ಗಾಯಿಸಿದ್ದರು ಎಂದು (ಇ.ಡಿ.) ಆಪಾದಿಸಿತ್ತು.
ಪಿಎನ್ಬಿಗೆ 13,400 ಕೋಟಿಗೂ ಹೆಚ್ಚು ಮೊತ್ತವನ್ನು ವಂಚಿಸಿರುವ ನೀರವ್ ಮೋದಿಯನ್ನು ಆರ್ಥಿಕ ವಂಚನೆ ಅಪರಾಧಿ ಎಂದು ಭಾರತದ ಕೋರ್ಟ್ ಘೋಷಿಸಿದೆ.
ಲಂಡನ್ನಲ್ಲಿ ನೆಲೆಸಿದ್ದ ನೀರವ್ರನ್ನು ಗಡಿಪಾರು ಮಾಡುವಂತೆ ಭಾರತ ಕೋರಿರುವ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಮತ್ತು ಹಸ್ತಾಂತರ ಪ್ರಕ್ರಿಯೆ ಸಂಬಂಧ ವಿಚಾರಣೆ ನಡೆಯುತ್ತಿದೆ.