ಲಾಹೋರ್,ಜು 02 (Daijiworld News/MSP): ಪಾಕಿಸ್ತಾನದಲ್ಲಿರುವ ಸುಮಾರು 500 ವರ್ಷಗಳಷ್ಟು ಪುರಾತನವಾದ ಗುರುದ್ವಾರ ಭೇಟಿಗೆ ಭಾರತೀಯರಿಗೂ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಈ ಹಳೆಯ ಗುರುದ್ವಾರಕ್ಕೆ ಭಾರತೀಯ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು.
ಲಾಹೋರ್ ನಿಂದ ಸುಮಾರೂ 140 ಕಿಲೋ ಮೀಟರ್ ದೂರದಲ್ಲಿರುವ ಸಿಯಾಲ್ ಕೋಟಿನ ಬಾಬೆ-ದೆ-ಬೆರ್ ಗುರುದ್ವಾರಕ್ಕೆ ಭೇಟಿ ನೀಡಲು ಈ ಹಿಂದೆ ಪಾಕಿಸ್ಥಾನ, ಯುರೋಪ್, ಕೆನಡಾ ಹಾಗೂ ಅಮೆರಿಕದ ಯಾತ್ರಿಗಳು ಇಲ್ಲಿಗೆ ಭೇಟಿ ನೀಡಲು ಅವಕಾಶ ಒದಗಿಸಿತ್ತು. ಈಗ ಭಾರತೀಯ ಯಾತ್ರಿಕರಿಗೂ ಅವಕಾಶ ಕಲ್ಪಿಸಿ ಅಲ್ಲಿನ ಸರಕಾರ ಆದೇಶ ಹೊರಡಿಸಿದೆ.
ವರ್ಷಂಪ್ರತಿ ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ರ ಜನ್ಮದಿನ ಹಾಗೂ ಪುಣ್ಯತಿಥಿಯಂದು ಭಾರತದ ಸಾವಿರಾರು ಸಿಖ್ ಯಾತ್ರಿಕರು ಪಾಕಿಸ್ಥಾನಕ್ಕೆ ಭೇಟಿ ನೀಡುತ್ತಾರೆ.
16ನೇ ಶತಮಾನದಲ್ಲಿ ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ಅವರು ಕಾಶ್ಮೀರದಿಂದ ಸಿಯಾಲ್ಕೋಟ್ಗೆ ಭೇಟಿ ನೀಡಿದಾಗ ಅವರು ಬೇರಿ ಎಂಬ ಹೆಸರಿನ ಮರದ ಕೆಳಗೆ ವಿಶ್ರಾಂತಿ ಪಡೆದಿದ್ದರು. ಇದರ ಸ್ಮರಣೆಗಾಗಿ ಸರ್ದಾರ್ ನಾಥ ಸಿಂಗ್ ಎಂಬಾತ ಈ ಪ್ರದೇಶದಲ್ಲಿ ಗುರುದ್ವಾರವನ್ನು ನಿರ್ಮಿಸಿದರು ಎನ್ನುವುದು ಸಿಖ್ ರ ನಂಬಿಕೆ. ಈಗ ಈ ಗುರುದ್ವಾರಕ್ಕೆ ಭೇಟಿ ನೀಡಲು ಪಾಕ್ ಸರಕಾರ ಅವಕಾಶ ಕಲ್ಪಿಸಿರುವುದು ಸಿಖ್ ಸಮುದಾಯದವರಿಗೆ ಸಂತೋಷ ತಂದಿದೆ.
ಇತ್ತೀಚೆಗಷ್ಟೇ ಭಾರತೀಯ ಸಿಖ್ ಯಾತ್ರಿಕರ ನೆರವಿಗಾಗಿ ಕರ್ತಾರ್ಪುರ ಕಾರಿಡಾರ್ ನಿರ್ಮಿಸುವ ಪ್ರಸ್ತಾವಕ್ಕೆ ಎರಡೂ ದೇಶಗಳು ಸಹಿ ಹಾಕಿದ್ದು, ಕಾಮಗಾರಿ ಕೂಡ ಆರಂಭವಾಗಿದೆ. ಇದರ ಬೆನ್ನಲ್ಲೇ ಈಗ ಬಾಬೆ-ದೆ-ಬೇರ್ ಗುರುದ್ವಾರದ ಬಾಗಿಲು ತೆರೆದಿರುವುದು ಸಿಕ್ಖ್ರಲ್ಲಿ ಸಂಭ್ರಮ ಮೂಡಿಸಿದೆ