ಅಟ್ಟಾರಿ, ಜು 01 (Daijiworld News/MSP): ಪಾಕಿಸ್ತಾನದಿಂದ ಅಟ್ಟಾರಿ ಗಡಿ ಮೂಲಕ ಭಾರತದೊಳಗೆ ಕಳ್ಳಸಾಗಣೆ ಮಾಡಿ ಸಾಗಿಸಲ್ಪಡುತ್ತಿದ್ದ 532 ಕೆ.ಜಿ ಹೆರಾಯಿನ್ (ಮಾದಕ ವಸ್ತು) ಚೀಲಗಳನ್ನ ಕಸ್ಟಮ್ಸ್ ಅಧಿಕಾರಿಗಳು ಅಟ್ಟಾರಿ ಬಾರ್ಡ್ರ್ ಬಳಿ ವಶಕ್ಕೆ ಪಡೆದಿದ್ದಾರೆ.
ಇದು ಬರೋಬ್ಬರಿ 2,700 ಕೋಟಿ ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ಇದು ದೇಶದಲ್ಲಿ ನಡೆದ ಮಾದಕ ವಸ್ತು ಕಳ್ಳಸಾಗಣೆ ವಿರುದ್ದದ ಬಹುದೊಡ್ಡ ಬೇಟೆ ಎಂದೇ ಹೇಳಲಾಗುತ್ತಿದೆ.
ಸುಮಾರು 600 ಬ್ಯಾಗ್ ತುಂಬಿದ್ದ ಲಾರಿ ಜಂಟಿ ಚೆಕ್ ಪೋಸ್ಟ್ ನಲ್ಲಿ ಪಾಕ್ ಅಧಿಕಾರಿಗಳು ಹೆಚ್ಚಿನ ಚೆಕಿಂಗ್ ಮಾಡದೇ ಬಿಟ್ಟು ಕಳುಹಿಸಿದ್ದರು. ಆದರೆ ಅಟ್ಟಾರಿ ಗಡಿಯಲ್ಲಿ ಭಾರತದ ಕಸ್ಟಮ್ಸ್ ಅಧಿಕಾರಿಗಳು ಕೂಲಂಕುಷ ತಪಾಸಣೆ ನಡೆಸಿದರು. ಈ ಸಂದರ್ಭ 15 ಗೋಣಿಯಲ್ಲಿ ಸಂಶಯಾತ್ಮಕ ಮಾದಕ ವಸ್ತುಗಳ ಮಿಶ್ರಣ ಪತ್ತೆಯಾಯಿತು. ಇನ್ನಷ್ಟು ಶೋಧಿಸಿದಾಗ ತಳಭಾಗದಲ್ಲಿ ಹೆರಾಯಿನ್ ಚೀಲಗಳು ಪತ್ತೆಯಾಯಿತು.
ಪಾಕಿಸ್ತಾನದಿಂದ ಭಾರತಕ್ಕೆ ತರಲಾಗುತ್ತಿದ್ದ ರಾಕ್ ಸಾಲ್ಟ್ನ ನೂರಾರು ಚೀಲಗಳ ನಡುವೆ ಹೆರಾಯಿನ್ ಚೀಲಗಳನ್ನು ಬಚ್ಚಿಡಲಾಗಿತ್ತು. ತಪಾಸಣೆ ವೇಳೆ ಹೆರಾಯಿನ್ ತುಂಬಿದ ಚೀಲಗಳು ಪತ್ತೆಯಾಗಿವೆ. ಇದ್ರ ಜೊತೆಗೆ ಹೆರಾಯಿನ್ನಂತೆಯೇ ಇರುವ ಮತ್ತೊಂದು ಚೀಲವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದರಲ್ಲಿರುವ ಮಿಶ್ರಣದ ಬಗ್ಗೆ ಅಧಿಕಾರಿಗಳಿಗೆ ಅನುಮಾನವಿದ್ದು, ಪರಿಶೀಲನೆಗೆ ರವಾನೆ ಮಾಡಲಾಗಿದೆ ಎಂದು ಕಸ್ಟಮ್ಸ್ ಆಯುಕ್ತ ದೀಪಕ್ ಕುಮಾರ್ ಗುಪ್ತಾ ಹೇಳಿದ್ದಾರೆ.