ನ್ಯೂಜೆರ್ಸಿ, ಜೂ30(Daijiworld News/SS): ನ್ಯೂಜೆರ್ಸಿಯ ಸೋಮರ್ಸೆಟ್ ಎಂಬಲ್ಲಿ 20 ಎಕರೆ ಪ್ರದೇಶದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ನಿರ್ಮಿಸುತ್ತಿರುವ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಭೂಮಿಪೂಜೆಯ ವಿವಿಧ ಧಾರ್ಮಿಕ ವಿಧಿಗಳಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪಾಲ್ಗೊಂಡಿದ್ದಾರೆ.
ಆದಿಚುಂಚನಗಿರಿ ಮಹಾಸಂಸ್ಥಾನವು ನಿರ್ಮಿಸುತ್ತಿರುವ ಈ ದೇವಾಲಯವು ಭಾರತೀಯರ, ಅದರಲ್ಲೂ ಕನ್ನಡಿಗರಿಗೆ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ. ಹೊರನಾಡ ಕನ್ನಡಿಗರು ತಮ್ಮ ಬೇರನ್ನು ಬಲಪಡಿಸಲು, ಸಂಸ್ಕೃತಿಯೊಂದಿಗೆ ಬೆಸೆದುಕೊಳ್ಳಲು ಇಂತಹ ಸಾಂಸ್ಕೃತಿಕ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಜೆರ್ಸಿಗೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸ್ಥಳೀಯ ಕನ್ನಡಿಗರು ಆದರದಿಂದ ಬರಮಾಡಿಕೊಂಡಿದ್ದಾರೆ. ಒಂದು ವಾರಗಳ ಕಾಲ ಎಚ್.ಡಿ.ಕುಮಾರಸ್ವಾಮಿ ಅಮೆರಿಕದ ಖಾಸಗಿ ಪ್ರವಾಸ ಕೈಗೊಂಡಿದ್ದಾರೆ.
ಜುಲೈ 4ರಂದು ಅಮೆರಿಕ ಒಕ್ಕಲಿಗರ ಪರಿಷತ್ತಿನ ಸಮಾವೇಶ ಕೂಡ ನಡೆಯಲಿದ್ದು, ಅದರಲ್ಲೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಗಳನ್ನು ಮುಗಿಸಿ, ಜುಲೈ 7ಕ್ಕೆ ಅಮೆರಿಕಾದಿಂದ ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಿಎಂ ಅವರ ಈ ಪ್ರವಾಸ ಸಂಪೂರ್ಣ ಖಾಸಗಿಯಾಗಿದ್ದು, ಸರ್ಕಾರ ಯಾವುದೇ ವೆಚ್ಚ ಭರಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.