ಒಸಾಕಾ, ಜೂ27(Daijiworld News/SS): ಭಾರತ ಅಮೆರಿಕದ ಮೇಲೆ ಹೇರುತ್ತಿರುವ ಅತಿಯಾದ ಆಮದು ಸುಂಕವನ್ನು ಹಿಂಪಡೆಯಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ.
ಅಮೆರಿಕದ ಮೋಟಾರ್ ಸೈಕಲ್'ಗಳ ಮೇಲೆ ಭಾರತ ವಿಧಿಸುತ್ತಿರುವ ಸುಂಕದ ಪ್ರಮಾಣ ಅತಿಯಾಗಿದೆ. ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಮ್ಮನ್ನು ಎಲ್ಲರೂ ದರೋಡೆ ಮಾಡುತ್ತಿದ್ದಾರೆ. ಅಮೆರಿಕವು ಮೂರ್ಖ ರಾಷ್ಟ್ರವಲ್ಲ, ಹೆಚ್ಚು ಸಮಯ ನಮ್ಮನ್ನು ಮೂರ್ಖರನ್ನಾಗಿ ಮಾಡಲಾಗದು. ಭಾರತವು ನಮ್ಮ ಉತ್ತಮ ಮಿತ್ರರಾಷ್ಟ್ರ ಎಂದು ಹೇಳಿದ್ದಾರೆ.
ಮೋಟಾರ್ಸೈಕಲ್ಗಳ ಮೇಲಿನ ಆಮದು ಸುಂಕವನ್ನು ಭಾರತ ಇತ್ತೀಚೆಗೆ ಶೇ.100ರಿಂದ ಶೇ.50ಕ್ಕೆ ಇಳಿಸಿತ್ತು. ಆದರೆ ಅದೂ ತೀರಾ ಅತಿಯಾಗಿದೆ. ಕೆಲವು ವರ್ಷಗಳಿಂದ ಭಾರತವು ಅಮೆರಿಕದ ಸರಕುಗಳಿಗೆ ಹೆಚ್ಚಿನ ಸುಂಕ ವಿಧಿಸುತ್ತಿದೆ. ಈಚೆಗೆ ಸುಂಕವನ್ನು ಮತ್ತೂ ಹೆಚ್ಚಿಸಲಾಗಿದೆ. ಇದನ್ನು ಒಪ್ಪಲಾಗದು. ಸುಂಕ ಹೆಚ್ಚಳವನ್ನು ವಾಪಸ್ ಪಡೆಯಬೇಕು ಎಂದು ಟ್ರಂಪ್ ಹೇಳಿದ್ದಾರೆ.
ಜಿ-20 ಶೃಂಗಸಭೆಯ ಸಮಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಜಪಾನ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಶಿಂಜೊ ಅಬೆ ಜೊತೆಗೆ ಮೊದಲ ಸಭೆ ನಡೆಸಲಿದ್ದಾರೆ. ನಾಳೆ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಮುಖಾಮುಖಿ ಭೇಟಿಯಾಗುವ ಸಾಧ್ಯತೆಯಿದೆ.