ಇರಾನ್, ಜೂ 27 (Daijiworld News/MSP): ಬಹಳ ಪುರಾತನವಾದ ಅಂದರೆ ಸುಮಾರು 2000 ಸಾವಿರ ವರ್ಷಗಳಷ್ಟು ಹಳೆಯದಾದ ಭಗವಾನ್ ಶ್ರೀರಾಮನನ್ನು ಹೋಲುವ ಉಬ್ಬುಚಿತ್ರವೊಂದು ಬಂಡೆಯ ಮೇಲೆ ಮಧ್ಯಪ್ರಾಚ್ಯದ ಇರಾನ್ ನಲ್ಲಿ ಪತ್ತೆಯಾಗಿದೆ. ಹೀಗಾಗಿ ರಾಮಾಯಣ ಎನ್ನುವುದು ಕೇವಲ ಕಟ್ಟುಕತೆ, ಪುರಾಣ ಎನ್ನುವುದಕ್ಕಿಂತ ಅದೊಂದು ಇತಿಹಾಸ ಆಗಿರಬಹುದು ಎನ್ನುವುದಕ್ಕೆ ಮತ್ತಷ್ಟು ಪುರಾವೆ ದೊರಕಿದಂತಾಗಿದೆ.
ಇರಾನ್ ನ ಹೊರೇನ್ ಶೇಖಾನ್ ಎನ್ನುವ ಪ್ರದೇಶದಲ್ಲಿ ಇರುವ ದರ್ಬಾಂದ್ ಐ ಬೇಲುಲಾ ಬಂಡೆಯಲ್ಲಿ ಈ ಉಬ್ಬುಚಿತ್ರ ಕಂಡು ಬಂದಿದೆ. ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆ ಮತ್ತು ಅಯೋಧ್ಯೆಯ ಶೋಧ ಸಂಸ್ಥಾನದ ವಿನಂತಿಸಿ ಆ ಬಳಿಕ ಇರಾಕ್ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ನೇತೃತ್ವದ ನಿಯೋಗ ಉಬ್ಬುಚಿತ್ರ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಈ ಉಬ್ಬುಚಿತ್ರವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಾಗ ರಾಮನನ್ನೇ ಹೋಲಿಕೆ ಮಾಡುವ ಕೆತ್ತನೆ ಕಂಡು ಬಂದಿರುವುದಾಗಿ ತಿಳಿಸಿದೆ.
ಯಾವುದೇ ಅಲಂಕಾರವಿಲ್ಲದೆ ಬೆತ್ತಲೆ ಎದೆಯನ್ನು ಹೊಂದಿರುವ ರಾಜ ಕೈಯಲ್ಲಿ ಬಿಲ್ಲನ್ನು ಹಾಗೂ ಬೆನ್ನಲ್ಲಿ ಬಾಣದ ಬತ್ತಳಿಕೆ ಇದೆ. ಮಾತ್ರವಲ್ಲದೆ ಸೊಂಟದ ಭಾಗದಲ್ಲಿ ಸಣ್ಣ ಖಡ್ಗವೊಂದಿದೆ. ರಾಜನ ಮುಂದೆ ಕೈ ಮುಗಿದು ನಿಂತ ಸೇವಕನ ಬಿಂಬವಿದ್ದು , ಇದು ಶ್ರೀರಾಮ ಮತ್ತು ಹನುಮಂತ ಎಂದು ಅಭಿಪ್ರಾಯಪಟ್ಟಿದ್ದಾರೆ ಅಯೋಧ್ಯಾ ಶೋಧ ಸಂಸ್ಥಾನ.
ಆದರೆ ಇರಾಕ್ ಪ್ರಾಚ್ಯವಸ್ತುತಜ್ಞರ ಪ್ರಕಾರ ಈ ಭಿತ್ತಿಚಿತ್ರ ಶ್ರೀರಾಮನಿಗೆ ಸಂಬಂಧಿಸಿದ್ದಲ್ಲ. ಇದು ಪರ್ವತ ಪ್ರದೇಶದ ಬುಡಕಟ್ಟು ಮುಖ್ಯಸ್ಥ " ತಾರ್ದುನ್ನಿ"ಯನ್ನು ಹೋಲುತ್ತದೆ ಎಂದು ತಿಳಿಸಿದ್ದಾರೆ. ಇದೇ ರೀತಿ ಇರಾಕ್ ನಾದ್ಯಂತ ರಾಜ ಮತ್ತು ಮಂಡಿಯೂರಿ ಕುಳಿತ ಸೇವಕನ ಚಿತ್ರ ಕಾಣಸಿಗುತ್ತದೆ ಎಂದು ವರದಿ ತಿಳಿಸಿದೆ.
ಅಯೋಧ್ಯೆ ಶೋಧ ಸಂಸ್ಥಾನದ ಪ್ರಕಾರ ಇದು ರಾಮ ಮತ್ತು ಅಂಜನೇಯ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ನಿಯೋಗ ಸಂಗ್ರಹಿಸಿದ ಭೌಗೋಳಿಕ ದಾಖಲೆಗಳ ವಿಸ್ತೃತ ಅಧ್ಯಯನದಿಂದ ಭಾರತೀಯ ಮತ್ತು ಮೆಸಪೊಟೇಮಿಯಾ ಸಂಸ್ಕೃತಿಗಳ ಕೊಂಡಿಯಾಗಿರಬಹುದು ಎಂದು ಅಂದಾಜಿಸಿದೆ.