ವಾಷಿಂಗ್ಟನ್, ಜೂ 24 (Daijiworld News/MSP): ಅಮೇರಿಕಾ-ಇರಾನ್ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಡ್ರೋನ್ ಹೊಡೆದುರುಳಿಸಿದ್ದಕ್ಕೆ ಇರಾನ್ ವಿರುದ್ದ ಅಸಮಧಾನಗೊಂಡಿರುವ ಅಮೇರಿಕಾ ಇದೀಗ ಇರಾನ್ ವಿರುದ್ಧ ಸೈಬರ್ ದಾಳಿ ನಡೆಸಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಮೇರಿಕಾದ ಡ್ರೋನ್ ಒಂದನ್ನು ಇರಾನ್ ಸೇನೆಯೂ ಇರಾನ್ ಗಡಿ ಭಾಗದಲ್ಲಿ ಹೊಡೆದುರುಳಿಸಿತ್ತು. ಈ ಘಟನೆಯ ಬಳಿಕ ಉಭಯ ದೇಶಗಳ ನಡುವೆ ಬಿಕ್ಕಟ್ಟು ತೀವ್ರಗೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್ನ ಕ್ಷಿಪಣಿ ನಿಯಂತ್ರಣಾ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸಿದೆ. ಕ್ಷಿಪಣಿಗಳು ಹಾಗೂ ರಾಕೆಟ್ಗಳನ್ನು ನಿಯಂತ್ರಿಸುವ ಕಂಪ್ಯೂಟರ್ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಗುಪ್ತಚರ ದಳದ ಮೂಲಗಳು ತಿಳಿಸಿವೆ.
ಈ ನಡುವೆ ಭಾರತವೂ ಇರಾನ್ ನ ವಾಯುಮಾರ್ಗವನ್ನು ಬಳಸಲಾಗುವುದಿಲ್ಲ ಎಂದು ಹೇಳಿದೆ. ಇರಾನ್ ವಾಯುಮಾರ್ಗದ ಬದಲು ಬೇರೆ ಸೂಕ್ತವಾದ ಬದಲಿ ಮಾರ್ಗವನ್ನು ಬಳಕೆ ಮಾಡಲಾಗುವುದು ಎಂದು ಭಾರತದ ವಿಮಾನ ನಿಯಂತ್ರಕ ಡಿಜಿಸಿಎ ಹೇಳಿದೆ.
ಇದರೊಂದಿಗೆ ಅಮೇರಿಕಾದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ಅಮೇರಿಕಾದ ನೋಂದಾಯಿತ ಏರ್ ಕ್ರಾಫ್ಟ್ ಗಳನ್ನು ತೆಹ್ರಾನ್ ಪ್ರದೇಶಗಳಲ್ಲಿ ಹಾರಾಟ ಮಾಡದಂತೆ ನಿರ್ಬಂಧ ವಿಧಿಸಿ ಆದೇಶ ನೀಡಿದೆ.