ವಾಷಿಂಗ್ಟನ್,ಜೂ20(DaijiworldNews/AZM): ಇರಾನ್ ಅಮೆರಿಕದ ನೌಕಾ ಕಣ್ಗಾವಲು ಡ್ರೋನ್ ಅನ್ನು ಹೊಡೆದುರುಳಿಸಿರುವುದನ್ನು ಅಮೆರಿಕದ ಕೇಂದ್ರ ಕಮಾಂಡ್ ದೃಢಪಡಿಸಿದೆ.
ಪರ್ಷಿಯಾ ಹಾಗೂ ಓಮನ್ ಗಡಿ ಭಾಗದಲ್ಲಿನ ಸ್ಟ್ರೇಟ್ ಆಫ್ ಹರ್ಮಜ್ ಬಳಿಯಲ್ಲಿ ನೌಕಾ ಕಣ್ಗಾವಲು ಡ್ರೋನ್ ಅನ್ನು ಹೊಡೆದುರುಳಿಸಿದೆ ಎನ್ನಲಾಗಿದೆ. ಅಮೆರಿಕ ಹಾಗೂ ಇರಾನ್ ನಡುವಿನ ಬಿಕ್ಕಟ್ಟಿನ ಪರಿಣಾಮವಾಗಿ ಓಮನ್ ಹಾಗೂ ಪರ್ಷಿಯನ್ ಗಲ್ಫ್ ಗಡಿ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ.
ಅಮೆರಿಕದ ನೌಕಾಪಡೆಯ ಕಣ್ಗಾವಲು ಐಎಸ್ ಆರ್ ವಿಮಾನವನ್ನು ಇರಾನ್ ನ ಭೂಮಿಯಿಂದ ಗಾಳಿಯತ್ತ ಚಿಮ್ಮುವ ಕ್ಷಿಪಣಿ ಬುಧವಾರ ರಾತ್ರಿ 11.35ರ ಸುಮಾರಿಗೆ ಹೊಡೆದುರುಳಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ವಕ್ತಾರ ಕ್ಯಾಪ್ಟನ್ ಬಿಲ್ ಅರ್ಬನ್ ಸ್ಪಷ್ಟಪಡಿಸಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಅಮೆರಿಕದ ಡ್ರೋನ್ ಇರಾನ್ ವಾಯುನೆಲೆಯಲ್ಲಿ ಪ್ರವೇಶಿಸಿತ್ತು ಎಂಬ ಇರಾನ್ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ. ಇರಾನ್ ಕ್ಷಿಪಣಿಗೆ ಗುರಿಯಾದ ಆರ್ ಕ್ಯೂ- 4 ಎ ಗ್ಲೋಬಲ್ ಹ್ವಾಕ್ ಮಾನವರಹಿತ ವೈಮಾನಿಕ ವ್ಯವಸ್ಥೆಯನ್ನು ಒಳಗೊಂಡಿದ್ದು, ಸಮುದ್ರ ಹಾಗೂ ಕರಾವಳಿ ಪ್ರಾಂತ್ಯಗಳ ಕಣ್ಗಾವಲು ಹಾಗೂ ಸ್ಥಳಾನ್ವೇಷಣೆ ಕಾರ್ಯದಲ್ಲಿ ತೊಡಗಿತ್ತು.
ಈ ಹಿಂದೆ ಇರಾನ್ ನ ಭದ್ರತಾ ಪಡೆಯ ಮುಖ್ಯ ಕಮಾಂಡರ್ ಮೇಜರ್ ಜನರಲ್ ಹುಸೇನ್ ಸಲಾಮಿ, ತಮ್ಮ ದೇಶದ ವಾಯುನೆಲೆಯ ವ್ಯಾಪ್ತಿಯನ್ನು ಪ್ರವೇಶಿಸಿದ್ದ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಇದು ಅಮೆರಿಕಕ್ಕೆ ಸ್ಪಷ್ಟ ಸಂದೇಶವಾಗಿದೆ ಎಂದಿದ್ದರು. ನಮ್ಮ ಗಡಿಗಳು ಇರಾನ್ ನ ಕೆಂಪು ರೇಖೆಗಳಾಗಿವೆ. ಅಲ್ಲಿನ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಇರಾನ್ ಯಾವುದೇ ದೇಶದೊಂದಿಗೆ ಯುದ್ಧಕ್ಕೆ ಸಜ್ಜಾಗಿಲ್ಲ. ಆದರೆ, ತಮ್ಮನ್ನು ರಕ್ಷಿಸಿಕೊಳ್ಳಲು ಸನ್ನದ್ಧರಾಗಿದ್ದೇವೆ ಎಂದಿದ್ದಾರೆ.