ಬೀಜಿಂಗ್, ಜೂ18(Daijiworld News/SS): ನೈಋತ್ಯ ಚೀನಾದಲ್ಲಿ 6.0 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದ್ದು 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭೂಕಂಪನ ಕೇಂದ್ರ ಬಿಂದುವಿನ ಸಮೀಪವಿದ್ದ ಹೋಟೆಲ್ ಒಂದು ಕುಸಿದಿದ್ದು, ಅಲ್ಲಿ ಸಾವು-ನೋವು ಸಂಭವಿಸಿದ ಬಗ್ಗೆ ಮಾಹಿತಿ ದೊರೆತಿಲ್ಲ. ಹಲವೆಡೆ ಹೆದ್ದಾರಿಗಳು ಬಿರುಕು ಬಿಟ್ಟಿವೆ. ಈಗಾಗಲೇ 11 ಮಂದಿ ಸಾವನ್ನಪ್ಪಿದ್ದು, 122 ಮಂದಿ ಗಾಯಗೊಂಡಿದ್ದಾರೆ. ಕುಸಿದ ಕಟ್ಟಡಗಳ ಅಡಿಯಿಂದ ಹಲವರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ,
ಚಾಗ್ನಿಂಗ್ ಕೌಂಟಿಯಲ್ಲಿ 8 ಮಂದಿ ಹಾಗೂ ಕ್ವಿಕ್ಸಿಯಾನ್ ಕೌಂಟಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಯಿಬಿನ್ ನಗರಾಡಳಿತ ತಿಳಿಸಿದೆ. ರಕ್ಷಣಾ ಸಿಬ್ಬಂದಿ ಕಟ್ಟಡದ ಅವಶೇಷಗಳ ಅಡಿಯಿಂದ 6 ಶವಗಳನ್ನು ಹೊರ ತೆಗೆದಿದ್ದು, 7 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಅಧಿಕೃತ ಸುದ್ದಿಸಂಸ್ಥೆ ಕ್ಸಿನುವಾ ತಿಳಿಸಿದೆ. ಈ ಪ್ರದೇಶದಲ್ಲಿ ನಂತರ 5.1 ತೀವ್ರತೆಯ ನಾಲ್ಕು ಪಶ್ಚಾತ್ ಕಂಪನಗಳು ಸಂಭವಿಸಿವೆ ಎನ್ನಲಾಗಿದೆ.
ಸಿಚುವಾನ್ ಪ್ರಾಂತ್ಯದ ಯಿಬಿನ್ ನಗರದ ಹೊರಗೆ ನೆಲದ 16 ಕಿ.ಮೀ ಆಳದಲ್ಲಿ ಈ ಭೂಕಂಪದ ಕೇಂದ್ರಬಿಂದುವಿತ್ತು ಎಂದು ಚೀನಾದ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.