ದುಬೈ, ಏ.16 (DaijiworldNews/AA): ಉದ್ಯಮಿ ಹಾಗು ದುಬೈಯ 'ಆಕ್ಮೆ' ಬಿಲ್ಡಿಂಗ್ ಮೆಟಿರಿಯಲ್ಸ್'ನ ಆಡಳಿತ ನಿರ್ದೇಶಕ ಆಗಿರುವ ಖ್ಯಾತ ಗಾಯಕ ಹರೀಶ್ ಶೇರಿಗಾರ್ ಅವರ ಸಾರಥ್ಯದಲ್ಲಿ ಶನಿವಾರ ದುಬೈನ ಅಲ್- ಜದ್ದಾಫ್'ನ 'ಸ್ವಿಸ್ ಇಂಟರ್ ನ್ಯಾಷನಲ್ ಸ್ಕೂಲಿನಲ್ಲಿ ನಡೆದ 'ಸ್ಯಾಂಡಲ್ವುಡ್ ಟು ಬಾಲಿವುಡ್’ ಎಂಬ ವಿಶೇಷ ಸಂಗೀತ, ನೃತ್ಯ ಹಾಗು ಹಾಸ್ಯಮಯ ನಾಟಕ ಪ್ರದರ್ಶನ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.





































ಕಾರ್ಯಕ್ರಮ ಆರಂಭದಿಂದ ಹಿಡಿದು ಕೊನೆಯವರೆಗೂ 'ಸ್ಯಾಂಡಲ್ವುಡ್ ಟು ಬಾಲಿವುಡ್' ಕಾರ್ಯಕ್ರಮ ಜನರನ್ನು ಆಸನಬಿಟ್ಟು ಕದಡದಂತೆ ಮಾಡುವ ಮೂಲಕ ಯಶಸ್ವಿಯಾಗಿ ನಡೆಯಿತು.
ಖ್ಯಾತ ಗಾಯಕರ ಸುಮಧುರ ಕಂಠಸಿರಿಯಿಂದ ಹೊರಹೊಮ್ಮಿದ ಸುಶ್ರಾವ್ಯ ಸಂಗೀತ ನೆರೆದ ಸಹಸ್ರಾರು ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು.
ದುಬೈ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್'ನ ಆಡಳಿತ ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬಸ್ತಿ ಅಲ್ ಮುಖ್ತಾ ಕನ್ಸ್ಟ್ರಕ್ಷನ್ ಗ್ರೂಪ್ ನಿರ್ದೇಶಕ ನಾರಾಯಣ ದೇವಾಡಿಗ, ಕಾರ್ಯಕ್ರಮದ ರುವಾರಿ ಹರೀಶ್ ಶೇರಿಗಾರ್ ಮತ್ತು ಅವರ ಧರ್ಮ ಪತ್ನಿ ಶರ್ಮಿಳಾ ಹರೀಶ್ ಶೇರಿಗಾರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಈ ವೇಳೆ ಉದ್ಯಮಿ ಗುಣಶೀಲ ಶೆಟ್ಟಿ, ಗಾಯಕ ನವೀದ್ ಮಾಗುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶೇಶ್ವರ ಭಟ್ ಹಾಗು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹರೀಶ್ ಶೇರಿಗಾರ್ ಅವರು ತಮ್ಮ ಸುಮಧುರ ಕಂಠದ ಮೂಲಕ ಹಳೆಯ ಹಿಂದಿ, ಕನ್ನಡ, ತುಳು ಸೂಪರ್ ಹಿಟ್ ಗೀತೆಗಳನ್ನು ಹಾಡುವ ಮೂಲಕ ನೆರೆದವರನ್ನು ಸಂಗೀತ ಲೋಕದಲ್ಲಿ ತೇಲಾಡುವಂತೆ ಮಾಡಿದರು.
ಕಲಾವಿದರಾದ ಗಾಯಕ ನವೀದ್ ಮಾಗುಂಡಿ, ನಯನಾ ರಾಜಗೋಪಾಲ್, ಅಕ್ಷತಾ ರಾವ್, ಜೋಸೆಫ್ ಮಥಾಯಿಸ್, ಗುಣಶೀಲ ಶೆಟ್ಟಿ, ವಿಘ್ನೇಷ್, ಸುರೇಶ್ ದೇವಾಡಿಗ, ಡಾ.ಪುಷ್ಪರಾಜ್ ಶೆಟ್ಟಿ, ಸನ್ನಿಧಿ ಶೆಟ್ಟಿ ಅವರ ಹಾಡು ಸಂಗೀತ ಪ್ರಿಯರನ್ನು ಮೋಡಿ ಮಾಡಿತು. ರಾಜ್ಗೋಪಾಲ್ ಮತ್ತು ತಂಡದವರ ಮ್ಯೂಸಿಕ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗುತಂದುಕೊಟ್ಟಿತು.
‘ಸೌಲ್ & ಬೀಟ್ಸ್ ವಿಎಮ್ ಕ್ರ್ಯೂ’ ದುಬೈ ತಂಡದಿಂದ ನೃತ್ಯ ಮನಸೂರೆಗೊಂಡಿತು. ದುಬೈಯ 'ಗಮ್ಮತ್ ಕಲಾವಿದೆರ್' ತಂಡದ 'ರಂಗ ಸಾರಥಿ' ವಿಶ್ವನಾಥ ಶೆಟ್ಟಿ ನಿರ್ದೇಶನದ ‘ಗಮ್ಮತೇ ಗಮ್ಮತ್’ ತುಳು ಹಾಸ್ಯ ನಾಟಕ ನೆರೆದವರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡಿತು. ಆರಂಭದಿಂದ ಕೊನೆಯವರೆಗೂ ಸ್ವೀನಿ ಡಿಸೋಜ ಹಾಗು ತನ್ಸೀಫ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.