ನೇಪಿಟಾವ್, ಮಾ.28(DaijiworldNews/AK) :ಮ್ಯಾನ್ಮಾರ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 60 ಮಂದಿ ಸಾವನ್ನಪ್ಪಿದ್ದು, 250 ಮಂದಿ ಗಾಯಗೊಂಡಿದ್ದಾರೆ.ಮ್ಯಾನ್ಮಾರ್ನಲ್ಲಿ ಸತತ ಎರಡು ಭೂಕಂಪಗಳು ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7 ಮತ್ತು 6.4 ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಭೂಕಂಪದ ಕೇಂದ್ರಬಿಂದು ಮಧ್ಯ ಮ್ಯಾನ್ಮಾರ್ನ ಮೋನಿವಾ ನಗರದಿಂದ ಸುಮಾರು 50 ಕಿಲೋಮೀಟರ್ ಪೂರ್ವಕ್ಕೆ ಇದೆ ಎಂದು ವರದಿಯಾಗಿದೆ. ಥೈಲ್ಯಾಂಡ್ನಲ್ಲಿಯೂ ನಾಲ್ಕು ಸಾವುಗಳು ವರದಿಯಾಗಿವೆ. 81 ಜನರು ಕಾಣೆಯಾಗಿದ್ದಾರೆ. 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮ್ಯಾನ್ಮಾರ್ನ ಮಂಡಲೇಯಲ್ಲಿರುವ ಐಕಾನಿಕ್ ಅವಾ ಸೇತುವೆ ಭೂಕಂಪದಲ್ಲಿ ಕುಸಿದು ಬಿದ್ದು, ಒಂದು ಮಸೀದಿ ಭಾಗಶಃ ಕುಸಿದು ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ. ಹಲವಾರು ಕಟ್ಟಡಗಳು ಕುಸಿದು ರಸ್ತೆಗಳು ಬಿರುಕು ಬಿಟ್ಟಿದೆ.ಮ್ಯಾನ್ಮಾರ್ ಜುಂಟಾ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ 'ತುರ್ತುಸ್ಥಿತಿ' ಘೋಷಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಭೂಕಂಪದ ನಂತರ ಬ್ಯಾಂಕಾಕ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಗಗನಚುಂಬಿ ಕಟ್ಟಡ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಹತ್ತಾರು ಮಂದಿ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.ಭೂಕಂಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಭಾರತೀಯ ಅಧಿಕಾರಿಗಳು ಸನ್ನದ್ಧರಾಗಿರುವಂತೆ ಸೂಚನೆ ನೀಡಿದ್ದಾರೆ.