ಲಂಡನ್, ಮಾ.21(DaijiworldNews/AK):ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಲಂಡನ್ನ ಹೀಥ್ರೂ ವಿಮಾನ ನಿಲ್ದಾಣ ವಿದ್ಯುತ್ ಸಮಸ್ಯೆಯಿಂದ 21 ರ ಮಧ್ಯರಾತ್ರಿಯವರೆಗೆ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ವಿಮಾನ ನಿಲ್ದಾಣದ ಹತ್ತಿರದಲ್ಲೇ ಇರುವ ವಿದ್ಯುತ್ ಸಬ್ಸ್ಟೇಷನ್ನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ವಿದ್ಯುತ್ ಸಮಸ್ಯೆಯಿಂದ ಸಾವಿರಾರು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.ನಮ್ಮ ಪ್ರಯಾಣಿಕರು ಮತ್ತು ಸಹೋದ್ಯೋಗಿಗಳ ಸುರಕ್ಷತೆಯ ಸಂಬಂಧ ಶುಕ್ರವಾರ ಪೂರ್ಣ ದಿನ ಹೀಥ್ರೂವನ್ನು ಮುಚ್ಚುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ವಿಮಾನ ನಿಲ್ದಾಣ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಫ್ಲೈಟ್ರಾಡರ್ 24 ಪ್ರಕಾರ, ಹೀಥ್ರೂ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಕನಿಷ್ಠ 120 ವಿಮಾನಗಳನ್ನು ಬೇರೆ ಸ್ಥಳಗಳಿಗೆ ತಿರುಗಿಸಲಾಗಿದೆ. ಬ್ರಿಟಿಷ್ ಏರ್ವೇಸ್, ಎಮಿರೇಟ್ಸ್ ಮತ್ತು ಏರ್ ಇಂಡಿಯಾ ಕಂಪನಿಗಳು ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಅಲ್ಲಿಂದ ಮರಳುವ ಎಲ್ಲಾ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.
ಈ ಅನಾಹುತದಿಂದ ಪಶ್ಚಿಮ ಲಂಡನ್ನ ಜನತೆ ವಿದ್ಯುತ್ ಇಲ್ಲದೇ ಗುರುವಾರ ರಾತ್ರಿ ಕಳೆದಿದ್ದಾರೆ. 16,300 ಕ್ಕೂ ಹೆಚ್ಚು ಮನೆಗಳಿಗೆ ಸಮಸ್ಯೆಯಾಗಿದೆ. ಸಬ್ಸ್ಟೇಷನ್ನ ಕಾಣಸಿದ ಅಗ್ನಿಯ ಜ್ವಾಲೆ ಹಲವು ಕಿ.ಮೀ ದೂರದವರೆಗೆ ಕಾಣಿಸಿತ್ತು.ಲಂಡನ್ ಅಗ್ನಿಶಾಮಕ ದಳ 10 ಅಗ್ನಿಶಾಮಕ ವಾಹನಗಳು ಮತ್ತು ಸುಮಾರು 70 ಅಗ್ನಿಶಾಮಕ ದಳದವರನ್ನು ನಿಯೋಜಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.