ವಾಷಿಂಗ್ಟನ್, ಮಾ.19 (DaijiworldNews/AA): ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಗಗನಯಾತ್ರಿ ಬುಚ್ ವಿಲ್ಮೋರ್ ಅವರು ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಇದೀಗ ಕೊಟ್ಟ ಮಾತನ್ನು ನಾವು ಈಡೇರಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸ್ಪೇಸ್ಎಕ್ಸ್ನ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್ ಆಗಿರುವ ಬಗ್ಗೆ ಮಾತನಾಡಿದ ಅವರು, ನಾನು ಅಧಿಕಾರಕ್ಕೆ ಬಂದಾಗ ಅವರನ್ನು ಮರಳಿ ಕರೆ ತರಬೇಕು ಎಂದು ಎಲಾನ್ ಮಸ್ಕ್ಗೆ ಹೇಳಿದ್ದೆ, ಅದು ಬೈಡನ್ಗೆ ಸಾಧ್ಯವಾಗಿರಲಿಲ್ಲ, ಈಗ ಅವರು ಹಿಂದಿರುಗಿದ್ದಾರೆ. ಅವರು ಗುಣಮುಖರಾದ ಬಳಿಕ ಓವಲ್ ಕಚೇರಿಗೆ ಬರುತ್ತಾರೆ ಎಂದು ಹೇಳಿದ್ದಾರೆ.
ಟ್ರಂಪ್ ಅವರ ಹೇಳಿಕೆ ಮುನ್ನ ಶ್ವೇತಭವನ ಹೇಳಿಕೆ ಬಿಡುಗಡೆ ಮಾಡಿದ್ದು, ನಾವು ಯಾವ ಭರವಸೆಯನ್ನು ನೀಡಿದ್ದೆವೋ ಅನ್ನು ಉಳಿಸಿಕೊಳ್ಳಲಾಗಿದೆ. ಅಧ್ಯಕ್ಷ ಟ್ರಂಪ್ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿರುವ ಗಗನಯಾತ್ರಿಗಳನ್ನು ರಕ್ಷಿಸುವುದಾಗಿ ಭರವಸೆ ನೀಡಿದ್ದರು. ಇಂದು ಅವರು ಸುರಕ್ಷಿತವಾಗಿ ಇಳಿದಿದ್ದಾರೆ. ಎಲೋನ್ ಮಸ್ಕ್, ಸ್ಪೇಸ್ಎಕ್ಸ್ ಮತ್ತು ನಾಸಾಗೆ ಧನ್ಯವಾದಗಳು ಎಂದು ಬರೆಯಲಾಗಿತ್ತು.