ಅಮೇರಿಕಾ, ಮಾ.19 (DaijiworldNews/AA): ಬರೋಬ್ಬರಿ 9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಗಗನಯಾತ್ರಿ ಬುಚ್ ವಿಲ್ಮೋರ್ ಅವರು ಕೊನೆಗೂ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.

ಸುನೀತಾ ವಿಲಿಯಮ್ಸ್, ಬುಚ್ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿದ್ದ ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 8.35ಕ್ಕೆ 400 ಕಿ.ಮೀ ದೂರದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಪಯಣ ಆರಂಭಿಸಿತ್ತು. ನಿರಂತರ 17 ಗಂಟೆಗಳ ಪಯಣದ ಬಳಿಕ ಭಾರತೀಯ ಕಾಲಮಾನ, ಇಂದು ನಸುಕಿನ ಜಾವ 3.27ರ ವೇಳೆಗೆ ಅಮೆರಿಕದ ಫ್ಲೋರಿಡಾ ಸಾಗರದಲ್ಲಿ ಬಾಹ್ಯಾಕಾಶ ನೌಕೆ ಲ್ಯಾಂಡ್ ಆಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದ 9 ತಿಂಗಳಿಂದ ಬೋಯಿಂಗ್ ಸ್ಟಾರ್ಲೈನರ್ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ವಿಲ್ಮೋರ್ ಸಿಲುಕಿಕೊಂಡಿದ್ದರು. ಹಾಗೂ ಇವರಿಬ್ಬರನ್ನು ಕರೆತರಲು 8 ದಿನಗಳ ಹಿಂದಷ್ಟೇ ನಾಸಾ ಗಗನಯಾತ್ರಿ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರು ತೆರಳಿದ್ದರು. ಆದರೆ ಇದೀಗ ಎಲ್ಲಾ ಗಗನಯಾತ್ರಿಗಳನ್ನು ಯಶಸ್ವಿಯಾಗಿ ಭೂಮಿಗೆ ಕರೆತರಲಾಗಿದೆ.