ವಾಷಿಂಗ್ಟನ್, ಮಾ.16 (DaijiworldNews/AA): ಅಮೆರಿಕದ ಮಧ್ಯ ಭಾಗದಲ್ಲಿ ಶನಿವಾರ ಚಂಡಮಾರುತ ಅಪ್ಪಳಿಸಿದ್ದು ಕನಿಷ್ಠ 33 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಈ ವಾರಾಂತ್ಯದಲ್ಲಿ ತೀವ್ರತರ ಸುಂಟರಗಾಳಿಯಿಂದಾಗಿ ಮನೆಗಳ ಛಾವಣಿಗಳು ಹರಿದುಹೋಗಿದ್ದು, ದೊಡ್ಡ ಟ್ರಕ್ಗಳು ಉರುಳಿಬಿದ್ದಿವೆ. ಕಾನ್ಸಾಸ್ನಲ್ಲಿ 50 ಕ್ಕೂ ಹೆಚ್ಚು ವಾಹನಗಳು ಪರಸ್ಪರ ಸಂಪರ್ಕ ಕಡಿತಗೊಂಡು ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ತೀವ್ರ ಧೂಳಿನ ಬಿರುಗಾಳಿಯಿಂದಾಗಿ ಸುತ್ತಮುತ್ತ ಏನೂ ಕಾಣಿಸುತ್ತಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಿಸೌರಿ ರಾಜ್ಯ ಹೆದ್ದಾರಿ ಗಸ್ತು ತಂಡವು ಚಂಡಮಾರುತದಿಂದ 12 ಸಾವುನೋವುಗಳನ್ನು ದೃಢಪಡಿಸಿದೆ. ಹವಾಮಾನ ವೈಪರಿತ್ಯದಿಂದಾಗಿ ನಾಶವಾದ ಮರೀನಾದಲ್ಲಿ ಒಂದರ ಮೇಲೊಂದು ದೋಣಿಗಳು ರಾಶಿ ಬಿದ್ದಿದೆ. ಮರಗಳು ಮತ್ತು ವಿದ್ಯುತ್ ತಂತಿಗಳು ಉರುಳಿಬಿದ್ದಿವೆ. ಕಟ್ಟಡಗಳಿಗೆ ಹಾನಿಯಾಗಿದೆ. ಕೆಲವು ಪ್ರದೇಶಗಳು ಬಿರುಗಾಳಿ, ಗುಡುಗು ಸಹಿತ ಮಳೆ ಮತ್ತು ದೊಡ್ಡ ಆಲಿಕಲ್ಲು ಮಳೆಯಿಂದಾಗಿ ತೀವ್ರ ಹಾನಿಗೊಳಗಾಗಿವೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಮಿಸಿಸಿಪ್ಪಿಯ ದಕ್ಷಿಣದಲ್ಲಿ ಶನಿವಾರ ತಡರಾತ್ರಿ ಆರು ಸಾವುಗಳು ವರದಿಯಾಗಿವೆ. ಮೂವರು ಕಾಣೆಯಾಗಿದ್ದಾರೆ ಎಂದು ರಾಜ್ಯದ ಗವರ್ನರ್ ತಿಳಿಸಿದ್ದಾರೆ. ಟೆಕ್ಸಾಸ್ನಲ್ಲಿ ಧೂಳಿನ ಬಿರುಗಾಳಿ ಮತ್ತು ಬೆಂಕಿಯಿಂದಾಗಿ ರಸ್ತೆಗಳಲ್ಲಿ ಗೋಚರತೆ ಕಡಿಮೆಯಾದ ಪರಿಣಾಮ ವಾಹನ ಅಪಘಾತಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.