ಇಸ್ಲಾಮಾಬಾದ್, ಮಾ.11 (DaijiworldNews/AA): 400 ಪ್ರಯಾಣಿಕರಿದ್ದ ಪಾಕಿಸ್ತಾನದ ಜಾಫರ್ ಎಕ್ಸ್ಪ್ರೆಸ್ ರೈಲನ್ನು ಬಲೂಚಿಸ್ತಾನ್ ಪ್ರಾಂತ್ಯದ ಪ್ರತ್ಯೇಕತಾ ವಾದಿ ಉಗ್ರರ ಗುಂಪು ಬೋಲಾನ್ ಪ್ರದೇಶದಲ್ಲಿ ಇಂದು ಹೈಜಾಕ್ ಮಾಡಿದೆ. ಉಗ್ರರೊಂದಿಗಿನ ಚಕಮಕಿ ವೇಳೆ 11 ಮಂದಿ ಪಾಕ್ ಸೈನಿಕರು ಹತ್ಯೆಗೀಡಾಗಿದ್ದಾರೆ. 182 ಪ್ರಯಾಣಿಕರನ್ನು ಒತ್ತೆಯಾಗಿರಿಸಿಕೊಂಡಿರುವ ಭಯೋತ್ಪಾದಕರು ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.

9 ಬೋಗಿಗಳಲ್ಲಿ ಸುಮಾರು 400 ಪ್ರಯಾಣಿಕರನ್ನು ಹೊತ್ತ ಜಾಫರ್ ಎಕ್ಸ್ಪ್ರೆಸ್ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ತೆರಳುತ್ತಿತ್ತು. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಭಯೋತ್ಪಾದಕ ಗುಂಪು ದಾಳಿ ಹೊಣೆ ಹೊತ್ತುಕೊಂಡಿದೆ.
ಮೊದಲಿಗೆ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್ಪ್ರೆಸ್ ಮೇಲೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಬೋಲಾನ್ನ ಧದರ್ನ ಮಶ್ಕಾಫ್ನಲ್ಲಿ ಪ್ರದೇಶದಲ್ಲಿ ಪೇಶಾವರ ಮಾರ್ಗದ ರೈಲ್ವೆ ಅಳಿಯನ್ನು ಉಗ್ರರು ಸ್ಫೋಟಿಸಿದ್ದಾರೆ. ಇದರಿಂದ ಜಾಫರ್ ಎಕ್ಸ್ಪ್ರೆಸ್ ಹಳಿ ತಪ್ಪಿದ್ದು, ದಾಳಿ ನಡೆಸಿದ ನಮ್ಮ ಉಗ್ರರು ರೈಲನ್ನು ಹೈಜಾಕ್ ಮಾಡಿದ್ದಾರೆ ಎಂದು ಉಗ್ರರ ಗುಂಪು ಹೇಳಿದೆ.
ಸದ್ಯ ಉಗ್ರರು ಸೆರೆ ಹಿಡಿದಿರುವ ಒತ್ತೆಯಾಳುಗಳಲ್ಲಿ ಪಾಕಿಸ್ತಾನಿ ಮಿಲಿಟರಿ, ಪೊಲೀಸ್, ಭಯೋತ್ಪಾದಕ ನಿಗ್ರಹ ದಳ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಕರ್ತವ್ಯ ನಿರತ ಸಿಬ್ಬಂದಿಯೂ ಸೇರಿದ್ದಾರೆ. ಇವರೆಲ್ಲರೂ ರಜೆಯ ಮೇಲೆ ಪಂಜಾಬ್ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಒತ್ತೆಯಾಳುಗಳ ಪೈಕಿ ಕೆಲವರು ಪಾಕಿಸ್ತಾನಿ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡಿದ್ದೇವೆ. ಆದ್ರೆ ಸೆರೆ ಸಿಕ್ಕ ಮಹಿಳೆಯರು ಮಕ್ಕಳು ಮತ್ತು ಬಲೂಚಿಸ್ತಾನದ ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದೇವೆ ಎಂದು ಉಗ್ರರ ಗುಂಪು ತಿಳಿಸಿದೆ.
ಘಟನೆ ಬಳಿಕ ಸ್ಥಳೀಯ ಸರ್ಕಾರವು ತುರ್ತು ಕ್ರಮಕ್ಕೆ ಮುಂದಾಗಿದ್ದು, ಪರಿಸ್ಥಿತಿ ನಿಭಾಯಿಸಲು ಎಲ್ಲಾ ರೀತಿಯ ಪ್ರಯತ್ನದಲ್ಲಿ ತೊಡಗಿದೆ. ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ತಲುಪಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.