ಇಸ್ಲಮಾಬಾದ್, ಫೆ.24 (DaijiworldNews/AA): ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ವೀಕ್ಷಣೆಗೆ ಆಗಮಿಸಿರುವ ವಿದೇಶಿಯರನ್ನು ಅಪಹರಿಸಿ ಸುಲಿಗೆ ಮಾಡಲು ಇಸ್ಲಾಮಿಕ್ ಸ್ಟೇಟ್ ಸಂಚು ರೂಪಿಸುತ್ತಿದೆ ಎಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ.

ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದಿಂದ ಸಂಭವಿಸಬಹುದಾದ ಬೆದರಿಕೆಯ ಕುರಿತು ಪಾಕ್ ಇಂಟಲಿಜೆನ್ಸ್ ವರದಿ ಮಾಡಿದೆ. ಭಯೋತ್ಪಾದಕ ಸಂಘಟನೆಯು ನಿರ್ದಿಷ್ಟವಾಗಿ ಚೀನೀ ಮತ್ತು ಅರಬ್ ಪ್ರಜೆಗಳನ್ನು ಗುರಿಯಾಗಿಸಿಕೊಂಡಿದ್ದು ಬಂದರುಗಳು, ವಿಮಾನ ನಿಲ್ದಾಣಗಳು, ಕಚೇರಿಗಳು ಮತ್ತು ಈ ದೇಶಗಳ ಸಂದರ್ಶಕರು ಹೆಚ್ಚಾಗಿ ಬಳಸುವ ವಸತಿ ಪ್ರದೇಶಗಳಲ್ಲಿ ಕಣ್ಗಾವಲು ನಡೆಸುತ್ತಿದೆ ಎಂದು ಮಾಹಿತಿ ನೀಡಿದೆ.
ಐಎಸ್ಕೆಪಿ ಕಾರ್ಯಕರ್ತರು ನಗರಗಳ ಹೊರವಲಯದಲ್ಲಿರುವ ಆಸ್ತಿಗಳನ್ನು ಸುರಕ್ಷಿತ ಮನೆಗಳಾಗಿ ಬಾಡಿಗೆಗೆ ಪಡೆಯಲು ಯೋಜಿಸಿದ್ದಾರೆ. ಕ್ಯಾಮೆರಾ ಕಣ್ಗಾವಲು ಇಲ್ಲದ ಮತ್ತು ರಿಕ್ಷಾ ಅಥವಾ ಮೋಟಾರ್ ಸೈಕಲ್ ಮೂಲಕ ಮಾತ್ರ ಪ್ರವೇಶಿಸಬಹುದಾದ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿದ್ದಾರೆ. ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಈ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ವರದಿ ತಿಳಿಸಿದೆ.
ಗುಪ್ತಚರ ವರದಿ ಬೆನ್ನಲ್ಲೇ ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆ (ಜಿಡಿಐ) ಪ್ರಮುಖ ಸ್ಥಳಗಳ ಮೇಲೆ ಸಂಭಾವ್ಯ ಐಎಸ್ಕೆಪಿ ದಾಳಿಗಳ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಸಿದೆ. ಈ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ಕಾಣೆಯಾದ ಕಾರ್ಯಕರ್ತರನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುತ್ತಿದೆ.