ದುಬೈ, ಜೂನ್ 12 (Daijiworld News/MSP): ದುಬೈನಲ್ಲಿ ಎಮಿರೇಟ್ಸ್ ರಿಸೈಕ್ಲಿಂಗ್ ಅವಾರ್ಡ್ನ 22ನೇ ಎಡಿಷನ್ನ ಗೌರವಕ್ಕೆ 8 ವರ್ಷದ ಭಾರತೀಯ ಮೂಲದ ಪುಟಾಣಿ ಪಾತ್ರರಾಗಿದ್ದಾರೆ. ದುಬೈನಲ್ಲಿ ಪೋಷಕರ ಜತೆ ನೆಲೆಸಿರುವ ಭಾರತೀಯ ಮೂಲದ ನಿಯಾ ಟೋನಿ ಎಂಬ ಬಾಲೆ 15,000 ಕೆಜಿ ತೂಕದ ಪೇಪರ್ ತ್ಯಾಜ್ಯ ಸಂಗ್ರಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಎಮಿರೇಟ್ಸ್ ಎನ್ವಿರಾನ್ಮೆಂಟ್ ಗ್ರೂಪ್ನ ರಾಷ್ಟ್ರೀಯ ಪುನರ್ ಬಳಕೆ ಅಭಿಯಾನದಲ್ಲಿ ಭಾಗವಿಹಿಸಿದ್ದ ಈ ಬಾಲೆ ಬರೋಬ್ಬರಿ 15 ಟನ್ ತ್ಯಾಜ್ಯಗಳನ್ನು ಸಂಗ್ರಹಿಸಿದ್ದಾರೆ. ಇದಕ್ಕಾಗಿ ಎಮಿರೇಟ್ಸ್ ರಿಸೈಕ್ಲಿಂಗ್ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಇಂಗಾಲದ ಡೈಆಕ್ಸೈಡ್ ಹೊರಹೊಮ್ಮುವುದನ್ನು ತಡೆಯುವ ನಿಟ್ಟಿನಲ್ಲಿ ಎಮಿರೇಟ್ಸ್ ಗ್ರೂಪ್ ಕೈಗೊಂಡ ಅಭಿಯಾನದಲ್ಲಿ ಬರೋಬ್ಬರಿ 73,393 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಕಾಗದ, ಪ್ಲಾಸ್ಟಿಕ್, ಗಾಜು, ಕ್ಯಾನ್ಗಳು ಮತ್ತು ಮೊಬೈಲ್ ಫೋನ್ಗಳು ಸೇರಿವೆ. ಈ ಪೈಕಿ ನಿಯಾ ಒಬ್ಬಾಕೆಯೇ 14,914 ಕೆಜಿ ತ್ಯಾಜ್ಯ ಸಂಗ್ರಹಿಸಿ ಎಲ್ಲರನ್ನು ಚಕಿತರನ್ನಾಗಿಸಿದ್ದಾಳೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಈಕೆ "ಪ್ರತಿಯೊಬ್ಬರ ಮನೆಗೆ ಹೋಗಿ ಕಾಗದ ತ್ಯಾಜ್ಯ, ಓದಿ ಮುಗಿದ ಪತ್ರಿಕೆ ಮುಂತಾದ ವಸ್ತುಗಳನ್ನು ನಾನು ಸಂಗ್ರಹಿಸಿ ತರುತ್ತಿದ್ದೆ ಮಾತ್ರವಲ್ಲದೆ ಪುನರ್ ಬಳಕೆಯ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತಿದೆ" ಎಂದಿದ್ದಾರೆ.